ADVERTISEMENT

‘ಜಂಗ್ಲೀ ಕುಲಪತಿಯ ಜಂಗೀ ಕಥೆ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 16:40 IST
Last Updated 17 ನವೆಂಬರ್ 2021, 16:40 IST
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತೇಜಸ್ವಿ ಕಟ್ಟೀಮನಿ ಮಾತನಾಡಿದರು. ಎಚ್‌.ಎಲ್.ಪುಷ್ಪಾ, ಜೋಗಿ ಇದ್ದರು
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತೇಜಸ್ವಿ ಕಟ್ಟೀಮನಿ ಮಾತನಾಡಿದರು. ಎಚ್‌.ಎಲ್.ಪುಷ್ಪಾ, ಜೋಗಿ ಇದ್ದರು   

ಬೆಂಗಳೂರು: ದೇಶದ 10 ಕೋಟಿ ಆದಿವಾಸಿಗಳಿಗೆ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಬೆಳಕಿನ ಕಿಂಡಿ ಇದ್ದಂತೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟೀಮನಿ ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ತಾಣ ಏರ್ಪಡಿಸಿದ್ದ ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರೊ. ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥನ ‘ಜಂಗ್ಲೀ ಕುಲಪತಿಯ ಜಂಗೀ ಕಥೆ’ ಬಿಡುಗಡೆ ಮಾಡಲಾಯಿತು. ಮಧ್ಯ ಪ್ರದೇಶದ ಅಮರ ಕಂಟಕದಲ್ಲಿ ಈ ಮೊದಲು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಯಾಗಿ ವಿಶ್ವವಿದ್ಯಾಲಯ ಕಟ್ಟಿದ ಕಥನವನ್ನು ಈ ಕೃತಿ ಒಳಗೊಂಡಿದೆ.

‘ಎಮ್ಮೆ ಕಾಯುತ್ತಿದ್ದ, ಒಂದೇ ಶರ್ಟ್‌ನಲ್ಲಿ ಕಾಲೇಜಿನ ವಿದ್ಯಾಭ್ಯಾಸ ಮಾಡಿದ ಹಳ್ಳಿ ಹುಡುಗನ ಮನಸ್ಸಿನ ತಲ್ಲಣ ಇದರಲ್ಲಿ ಚಿತ್ರಣಗೊಂಡಿದೆ. ದೇಶದ ಎಲ್ಲೆಡೆ ಹಂಚಿ ಹೋಗಿರುವ ಬುಡಕಟ್ಟು ಮಕ್ಕಳಿಗೆ ಈ ವಿಶ್ವವಿದ್ಯಾಲಯ ಆಸರೆಯಾಗಿದೆ. ಈ ಸಮಯದಲ್ಲಿ ಅವರ ಕುಶಲತೆ ದೇಶ– ವಿದೇಶಕ್ಕೆ ಪರಿಚಯಿಸುವ ಅವಕಾಶ ನನಗೆ ದೊರೆಯಿತು’ ಎಂದು ತೇಜಸ್ವಿ ಕಟ್ಟೀಮನಿ ಸಂತಸ ವ್ಯಕ್ತಪಡಿಸಿದರು.

ADVERTISEMENT

ಕೃತಿ ಬಿಡುಗಡೆ ಮಾಡಿದ ಪತ್ರಕರ್ತ ಜೋಗಿ, ‘ಯಾವುದೇ ವಿಶ್ವವಿದ್ಯಾಲಯಕ್ಕೂ ಆತ್ಮಕತೆ ಇರುತ್ತದೆ ಎನ್ನುವುದನ್ನು ತೇಜಸ್ವಿ ಕಟ್ಟೀಮನಿ ತೋರಿಸಿಕೊಟ್ಟಿದ್ದಾರೆ’ ಎಂದರು. ಕೃತಿ ಕುರಿತು ಕವಯಿತ್ರಿ ಎಚ್.ಎಲ್. ಪುಷ್ಪಾ, ‘ಅವಧಿ’ ಪ್ರಧಾನ ಸಂಪಾದಕ ಜಿ.ಎನ್. ಮೋಹನ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.