ADVERTISEMENT

ಇತಿಹಾಸದ ಸತ್ಯ ಅಡಗಿಸಲು ಬಿಡೆವು: ಬಿ. ಎಲ್‌. ಸಂತೋಷ

​ಪ್ರಜಾವಾಣಿ ವಾರ್ತೆ
Published 22 ಮೇ 2023, 4:14 IST
Last Updated 22 ಮೇ 2023, 4:14 IST
ಸಾವರ್ಕರ್ ಸಮಗ್ರ ಸಂಪುಟ–6 ಕೃತಿ ಬಿಡುಗಡೆ ಮಾಡಿದ ಬಿ ಎಲ್‌ ಸಂತೋಷ್‌
ಸಾವರ್ಕರ್ ಸಮಗ್ರ ಸಂಪುಟ–6 ಕೃತಿ ಬಿಡುಗಡೆ ಮಾಡಿದ ಬಿ ಎಲ್‌ ಸಂತೋಷ್‌   

ಬೆಂಗಳೂರು: ‘ಸ್ವಾತಂತ್ರ್ಯದ ಬಳಿಕ ಸುಳ್ಳಿನ ಇತಿಹಾಸ ಹೆಣೆಯುತ್ತಾ ನೇತಾಜಿ, ಸಾವರ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿ ಕೆಲವರಿಗೆ ಅನ್ಯಾಯ ಮಾಡಲಾಯಿತು. ಈಗ ಇತಿಹಾಸ ಸರಿಪಡಿಸಲು ಅನೇಕ ಹೆಜ್ಜೆಗಳನ್ನು ಇಡಲಾಗುತ್ತಿದೆ’ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು. 

ಸಾವರ್ಕರ್ ಸಾಹಿತ್ಯ ಸಂಘ ಹಾಗೂ ದಿ ಮಿಥಿಕ್ ಸೊಸೈಟಿ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಸಾವರ್ಕರ್ ಸಮಗ್ರ ಸಂಪುಟ–6’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ಸತ್ಯವನ್ನು ಶಾಶ್ವತವಾಗಿ ಅಡಗಿಸಿಡಲು ಸಾಧ್ಯವಿಲ್ಲ. ದೇಶದಲ್ಲಿ 100 ವರ್ಷಗಳಿಂದ ಬಹಳ ಸಂಗತಿಗಳು ತಮ್ಮ ಸತ್ಯಕ್ಕೆ, ತಮ್ಮ ಗುರಿಗೆ ಹೊಂದದವರ ಮೇಲೆ ಪರದೆ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರಲಾಗಿದೆ. ಇದು ತಂತ್ರದ ಭಾಗವಾಗಿತ್ತು. ನೇತಾಜಿ, ಸಾವರ್ಕರ್ ಬಗ್ಗೆ ಮಾತನಾಡುವವರು ಬಲಪಂಥೀಯರು, ‘ಭಾರತ್ ಮಾತಾ ಕೀ ಜೈ’ ಎನ್ನುವವರು ಆರೆಸ್ಸೆಸ್‌ನವರು ಎಂದು ಬ್ರ್ಯಾಂಡ್ ಮಾಡಲಾಯಿತು. ಪಶ್ಚಿಮದಿಂದ ಎರವಲು ಪಡೆದ ಈ ತಂತ್ರ ಶಾಶ್ವತವಾಗಿ ಉಳಿಯುವುದಿಲ್ಲ ಎನ್ನುವುದು ಈಗ ಅರಿವಿಗೆ ಬರುತ್ತಿದೆ. ಇತಿಹಾಸದ ಸತ್ಯವನ್ನು ತುಂಬಾ ದಿನ ಅಡಗಿಸಿ ಇಡಲು ಸಾಧ್ಯವಿಲ್ಲ’ ಎಂದರು. 

ADVERTISEMENT
ಮೋಜು–ಮಸ್ತಿ ಜ್ಞಾನಪೀಠಕ್ಕೆ ಸಾವರ್ಕರ್ ಅವರು ಸಾಹಿತ್ಯ ಸೃಷ್ಟಿಸಿಲ್ಲ. ವೀರತ್ವದ ಸಾಹಿತ್ಯ ನಮ್ಮಲ್ಲಿ ನೆಲ ಕಚ್ಚಿದೆ. ಶೌರ್ಯ ಪರಾಕ್ರಮ ಪುನರ್ ಜಾಗರಣ ಆಗಬೇಕು.
ಜಿ.ಬಿ. ಹರೀಶ, ಕೃತಿಯ ಸಂಪಾದಕ

‘ಅನುಕೂಲಕರ ಸತ್ಯಕ್ಕೆ ಸಾವರ್ಕರ್ ಹೊಂದುವುದಿಲ್ಲ. ಇದರಿಂದಾಗಿ ಸಾವರ್ಕರ್ ಅನೇಕರಿಗೆ ಅಪ್ರಿಯ. ಸಾರ್ವಜನಿಕ ಜೀವನದಲ್ಲಿ 10ರಿಂದ 5 ಗಂಟೆ ಕಾರ್ಯ ನಿರ್ವಹಿಸುವವರಿಗೆ ರಾಜಕಾರಣ, ದೇಶದ ಕೆಲಸದಲ್ಲಿ ಸಾವರ್ಕರ್ ಕುಳಿತುಕೊಳ್ಳುವುದಿಲ್ಲ. ಅವರನ್ನು ಸ್ವೀಕರಿಸಿವುದು ಅಂದರೇ ಬದುಕನ್ನು ಸುಟ್ಟುಕೊಳ್ಳುವುದು’ ಎಂದು ಹೇಳಿದರು. 

‘ಅನ್ಯಾಯಗಳು ನಮಗೆ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಸತ್ಯ ಕಥೆಗಳು ಹೊರಬರುತ್ತವೆ. ‘ದಿ ಕೇರಳ ಸ್ಟೋರಿ’, ‘ಕಾಶ್ಮೀರಿ ಫೈಲ್ಸ್’ನಂತಹ ಸಿನಿಮಾಗಳು ಉದಾಹರಣೆ. ಈ ಸಿನಿಮಾಗಳು ಕಟ್ಟು ಕಥೆಯಲ್ಲ, ವಾಸ್ತವದ ದರ್ಶನ’ ಎಂದರು. 

ದೇಶದ ಇತಿಹಾಸವನ್ನು ಮುಸ್ಲಿಂ ಐರೋಪ್ಯ ಇತಿಹಾಸಕಾರರು ತಮ್ಮ ಮೂಗಿನ ನೇರಕ್ಕೆ ಬರೆದರು. ಸಾವರ್ಕರ್ ಅವರು ದಾಖಲೆಗಳನ್ನು ಪರಿಶೀಲಿಸಿ ಇತಿಹಾಸ ಬರೆದಿದ್ದಾರೆ.
ವಿ. ನಾಗರಾಜ್ ದಿ. ,ಮಿಥಿಕ್ ಸೊಸೈಟಿ ಅಧ್ಯಕ್ಷ

ವಿದ್ವಾಂಸೆ ಎಸ್.ಆರ್. ಲೀಲಾ, ‘ದೇಶ ನೆಮ್ಮದಿಯಿಂದ ಇರಲು ಧರ್ಮದ್ವೇಷಿಗಳ ವಿನಿಮಯದ ಬಗ್ಗೆ ಅಂಬೇಡ್ಕರ್ ಪ್ರಸ್ತಾಪಿಸಿದ್ದರು. ಅವರ ಮಾತನ್ನು ಗಂಭೀರವಾಗಿ ಪರಿಗಣಿಸದಿದ್ದರಿಂದ ಈಗ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ಕ್ರಮ

ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್, ‘ಯಾವುದೇ ಪುರಾವೆ ಇಲ್ಲದೆ ಕೆಲವರು ಸಾವರ್ಕರ್ ಅವರ ಬಗ್ಗೆ ಆರೋಪ ಮಾಡುತ್ತಾರೆ. ಈಗಾಗಲೇ ಅಂತಹವರ ಮೇಲೆ ಕಾನೂನು ಹೋರಾಟ ಮಾಡಲಾಗುತ್ತಿದೆ. ಮಹಾಪುರುಷ ಸಾವರ್ಕರ್ ಅವರಿಗೆ ಸೂಕ್ತ ಗೌರವ ನೀಡುವ ಕೆಲಸ ಆಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.