
ಮಹಾತ್ಮಾ ಗಾಂಧಿ
ಬೆಂಗಳೂರು: ‘ಸರ್ಕಾರ ನೀಡುತ್ತಿರುವ ಭಾಗ್ಯಗಳನ್ನು ಮಹಿಳಾ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಅವರು ಅಭಿಪ್ರಾಯಪಟ್ಟರು.
ಬಹುರೂಪಿ ಪ್ರಕಾಶನ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಚೀ.ಜ.ರಾಜೀವ ಅವರ ‘ಪ್ರಿಯ ಗಾಂಧಿ’ ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ಭಾಗ್ಯಗಳನ್ನು ಕೊಡುಗೆಯಾಗಿ ನೋಡದೆ ಅದನ್ನು ಪರ್ಯಾಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯವಿದೆ. ಮಹಿಳಾ ಸಬಲೀಕರಣಕ್ಕೆ ಅದು ನೀಡಿರುವ ಕೊಡುಗೆ ದೊಡ್ಡದು. ಇವು ಗಾಂಧೀಜಿ ಅವರ ದೃಷ್ಟಿಕೋನವನ್ನು ಹೊಂದಿವೆ’ ಎಂದರು.
ಪತ್ರಕರ್ತೆ ಆರ್. ಪೂರ್ಣಿಮಾ ಮಾತನಾಡಿ, ‘ಗಾಂಧೀಜಿ ಜಾಗತಿಕವಾಗಿ ಹರಡಿರುವ ರೀತಿ ನಮ್ಮೆಲ್ಲರಿಗೂ ಪಾಠವಾಗಬೇಕು. ನಿಜ ಅರ್ಥದಲ್ಲಿ ಅವರೇ ವಿಶ್ವಗುರು. ‘ಪ್ರಿಯ ಗಾಂಧಿ’ ಕೃತಿಯಲ್ಲಿ ನಾವು ಮನಗಾಣಬೇಕಾದ, ಚರ್ಚಿಸಬೇಕಾದ ಹಲವು ವಿಷಯಗಳು ಇವೆ’ ಎಂದರು.
ಪತ್ರಕರ್ತ ಸುದರ್ಶನ ಚನ್ನಂಗಿಹಳ್ಳಿ ಮಾತನಾಡಿ, ‘ಗಾಂಧಿ ಪೀಠಗಳು, ಗಾಂಧಿ ಅಧ್ಯಯನ ಕೇಂದ್ರಗಳು ಸೊರಗುತ್ತಿವೆ. ಇವುಗಳನ್ನು ಸಶಕ್ತಗೊಳಿಸಿದರೆ ಗಾಂಧಿ ಚಿಂತನೆಗಳನ್ನು ಹರಡಲು ಸಹಕಾರಿ ಆಗಲಿದೆ’ ಎಂದು ತಿಳಿಸಿದರು.
ಪತ್ರಕರ್ತ ಜಿ.ಎನ್.ಮೋಹನ್, ಬಹುರೂಪಿಯ ಶ್ರೀಜಾ ವಿ.ಎನ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.