ADVERTISEMENT

ಹಬೀಬ್‌ ಕೃತಿಗಳ ಬಿಡುಗಡೆ ನಾಳೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 21:39 IST
Last Updated 11 ಮಾರ್ಚ್ 2021, 21:39 IST
ಇರ್ಫಾನ್ ಹಬೀಬ್
ಇರ್ಫಾನ್ ಹಬೀಬ್   

ಬೆಂಗಳೂರು: ಖ್ಯಾತ ಇತಿಹಾಸಕಾರ ಪ್ರೊ. ಇರ್ಫಾನ್‌ ಹಬೀಬ್‌ ಸಂಪಾದಕತ್ವದ ಮೂರು ಕೃತಿಗಳ ಬಿಡುಗಡೆ ಇದೇ 13ರಂದು ಆನ್‌ಲೈನ್‌ನಲ್ಲಿ ನಡೆಯಲಿದೆ. ಇದೇ ವೇಳೆ, ಇರ್ಫಾನ್‌ ಹಬೀಬ್‌ ಅವರು ’ವೈ ಪೀಪಲ್ಸ್‌ ಹಿಸ್ಟರಿ ಆಫ್‌ ಇಂಡಿಯಾ ಸೀರಿಸ್‌‘ ಕುರಿತು ಉಪನ್ಯಾಸ ನೀಡಲಿದ್ದಾರೆ.

’ಭಾರತದ ಆರ್ಥಿಕತೆ‘, ’ಮೌರ್ಯರ ನಂತರದ ಭಾರತ‘ ಹಾಗೂ ’ಮೌರ್ಯರ ನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ‘ ಎಂಬ ಕೃತಿಗಳು ಬಿಡುಗಡೆಯಾಗಲಿವೆ.

ಭಾರತದ ಆರ್ಥಿಕತೆ ಕೃತಿಯು ಬ್ರಿಟಿಷ್‌ ಆಡಳಿತದ ಪ್ರಾರಂಭಿಕ ಹಂತಕ್ಕೆ (1757–1857) ಸಂಬಂಧಿಸಿದ್ದಾಗಿದೆ. ಹಬೀಬ್‌ ಅವರು ರಚಿಸಿರುವ ಈ ಕೃತಿಯನ್ನು ಕೆ.ಎಂ. ಲೋಕೇಶ್‌ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರ ಬೆಲೆ ₹140.

ADVERTISEMENT

ಮೌರ್ಯರ ನಂತರದ ಭಾರತ – ರಾಜಕೀಯ ಮತ್ತು ಆರ್ಥಿಕ ಇತಿಹಾಸ ಕೃತಿಯನ್ನು ಎಸ್.ಎನ್. ಸ್ವಾಮಿ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಮೌರ್ಯರ ಸುಮಾರು 500 ವರ್ಷಗಳ ಕಾಲಾವಧಿಯ ರಾಜಕೀಯ ಮತ್ತು ಆರ್ಥಿಕ ಇತಿಹಾಸವನ್ನು ಮಾತ್ರ ಚರ್ಚಿಸುತ್ತದೆ. ಇದರ ಬೆಲೆ ₹140.

ಹಬೀಬ್‌ ಸಂಪಾದಕತ್ವದ ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ ಕೃತಿಯ ಮೂಲ ಲೇಖಕರು ಪ್ರೊ. ಭೈರಬಿ ಪ್ರಸಾದ ಸಾಹು, ಪ್ರೊ. ಕೇಶವನ್ ವೇಲುತಾಟ್. ಈ ಕೃತಿಯನ್ನು ಡಾ. ಟಿ. ವೆಂಕಟೇಶಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಬೆಲೆ ₹90.

ಈ ಮೂರೂ ಕೃತಿಗಳನ್ನು ‘ಚಿಂತನ ಪುಸ್ತಕ’ ಪ್ರಕಟಿಸಿದೆ. ಬೆಂಗಳೂರು ಹಿಸ್ಟೋರಿಯನ್ಸ್‌ ಸೊಸೈಟಿ, ಇತಿಹಾಸ ದರ್ಪಣ ಹಾಗೂ ಋತುಮಾನ.ಕಾಮ್‌ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 5ಕ್ಕೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಡಾ.ಎಸ್. ಚಂದ್ರಶೇಖರ, ಡಾ.ಎಸ್‌.ಕೆ. ಅರುಣಿ, ಡಾ.ಎಸ್.ಪಿ. ವಾಗೀಶ್ವರಿ ಕೃತಿಗಳ ಬಗ್ಗೆ ಮಾತನಾಡಲಿದ್ದಾರೆ.

ಜನಶಕ್ತಿ ಮೀಡಿಯಾ ಹಾಗೂ ಋತುಮಾನ.ಕಾಮ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.