ADVERTISEMENT

ಮಕ್ಕಳಿಗೆ ಊಟ ಮಾಡಿಸಲು ಮೊಬೈಲ್ ಕೊಡುವುದು ಅನಿವಾರ್ಯ: ಎಸ್.ಜಿ.ಸಿದ್ಧರಾಮಯ್ಯ

ವಸಂತ ಪ್ರಕಾಶನದ 12 ಮಕ್ಕಳ ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 4:24 IST
Last Updated 25 ಸೆಪ್ಟೆಂಬರ್ 2022, 4:24 IST
ಎಸ್.ಜಿ.ಸಿದ್ಧರಾಮಯ್ಯ
ಎಸ್.ಜಿ.ಸಿದ್ಧರಾಮಯ್ಯ   

ಬೆಂಗಳೂರು: ‘ಮಕ್ಕಳಿಗೆ ಊಟ ಮಾಡಿಸಲು ಈಗ ಮೊಬೈಲ್ ಫೋನ್ ಕೊಡುವುದು ಅನಿವಾರ್ಯವಾಗಿದೆ. ನಮ್ಮ ಜನಪದರು ಮಕ್ಕಳಿಗೆ ಅನ್ನದ ಜತೆಗೆ ಅರಿವನ್ನೂ ತಿನ್ನಿಸುತ್ತಿದ್ದರು. ಅದು ಅತ್ಯಂತ ಮುಖ್ಯವಾದ ಕೆಲಸ’ ಎಂದು ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ವಸಂತ ಪ್ರಕಾಶನ ಪ್ರಕಟಿಸಿರುವ ‌ಎಚ್.ಎಸ್. ವೆಂಕಟೇಶಮೂರ್ತಿ ಅವರು ಸಂಪಾದಿಸಿರುವ ‘ವಸಂತ ಬಾಲ ಸಾಹಿತ್ಯ ಮಾಲೆ’ಯ 12 ಮಕ್ಕಳ ಕೃತಿಗಳನ್ನು ಬಿಡುಗಡೆ ಮಾಡಿ ಮಾತ ನಾಡಿದ ಅವರು, ‘ಆಟ ಮತ್ತು ಊಟದ ಹೊತ್ತಿನಲ್ಲೂ ಮಕ್ಕಳಲ್ಲಿ ಪ್ರಪಂಚ ಜ್ಞಾನವನ್ನು ಸೃಜನಶೀಲವಾಗಿ ತುಂಬುತ್ತಿದ್ದರು. ಈಗಿನ ಮಕ್ಕಳಿಗೆ ಮೊಬೈಲ್‌ ಇಲ್ಲದೆ ಊಟ ಮಾಡಿಸು ವುದೇ ಕಷ್ಟ. ಫೋನ್‌ನಲ್ಲಿ ಬರುವ ಚಿತ್ರ ಗಳಿಗೂ, ತಿನ್ನುವ ತುತ್ತಿಗೂ ಸಂಬಂಧವೇ ಇರುವುದಿಲ್ಲ. ನವ್ಯ ಸಾಹಿತಿಗಳು ಮಕ್ಕಳ ಸಾಹಿತ್ಯದಿಂದ ದೂರವಾಗಿದ್ದರು. ಮಹಾಕಾವ್ಯಗಳನ್ನೂ ರಚಿಸಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು 12 ಮಕ್ಕಳ ಕೃತಿಗಳನ್ನು ತಮ್ಮ ಸಂಪಾದಕತ್ವದಲ್ಲಿ ಹೊರ ತಂದಿರುವುದು ಸಂತಸದ ಸಂಗತಿ’ ಎಂದು ಹೇಳಿದರು.

‌‌ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ಮಕ್ಕಳ ಸಾಹಿತ್ಯ ಲೋಕಕ್ಕೆ ಹನ್ನೆರಡು ಕೃತಿಗಳು ಒಂದೇ ದಿನ ಲೋಕಾರ್ಪಣೆಗೊಂಡಿದ್ದು, ಇದು ಸುಲಭದ ಸಂಗತಿಯಲ್ಲ. ಕೃತಿಗಳು ಮಕ್ಕಳ ಮನಸ್ಸನ್ನು ತಲುಪುವಂತೆ ಮಾಡುವುದು ಪೋಷಕರ ಕರ್ತವ್ಯ’ ಎಂದು ಸಲಹೆ ನೀಡಿದರು.

ADVERTISEMENT

ಕೃತಿಗಳನ್ನು ಪರಿಚಯಿಸಿದ ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮಾತನಾಡಿ, ‘ಮಕ್ಕಳ ಸಾಹಿತ್ಯಕ್ಕೆ ಇದು ಸಮೃದ್ಧಿಯ ವರ್ಷವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಕನ್ನಡ ಬರಹಲೋಕ ತೆರೆದುಕೊಳ್ಳುತ್ತಿದೆ ಎಂಬುದಕ್ಕೆ 12 ಮಕ್ಕಳ ಕೃತಿಗಳ ಬಿಡುಗಡೆಯೇ ಸಾಕ್ಷಿ. ಎಲ್ಲಾ ಲೇಖಕರು ತಮ್ಮ ಜೀವಮಾನದಲ್ಲಿ ಒಂದಾದರೂ ಮಕ್ಕಳ ಸಾಹಿತ್ಯದ ಕೃತಿ ರಚಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.