ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಗೌರವಿಸಲಾಯಿತು. ಜಿ.ಎನ್. ಮೋಹನ್, ಶಿವಾನಂದ ತಗಡೂರು, ಕೆ.ವಿ. ಪ್ರಭಾಕರ್, ಕೆ.ಎನ್. ಚನ್ನೇಗೌಡ ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬುಕರ್ ಅಥವಾ ಯಾವುದೇ ಪ್ರಶಸ್ತಿ ಪಡೆಯಬೇಕು ಎಂಬುದು ನನ್ನ ಮನಸ್ಸಲ್ಲಿ ಹೊಳೆದೇ ಇರಲಿಲ್ಲ. ಆದರೆ, ನನ್ನ ಕಥೆಗಳು ಇಂಗ್ಲಿಷ್‌ಗೆ ಅನುವಾದವಾಗಬೇಕು. ಭಾಷೆಯ ಮಿತಿ, ಗಡಿಯ ಎಲ್ಲೆಯನ್ನು ಮೀರಿ ಓದುವಂತಾಗಬೇಕು ಎಂಬುದು ನನ್ನ ಬಯಕೆಯಾಗಿತ್ತು’ ಎಂದು ಬಾನು ಮುಷ್ತಾಕ್ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ, ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಗಾಂಧಿ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ದೀಪಾ ಭಾಸ್ತಿ ಇಂಗ್ಲಿಷ್‌ಗೆ ಅನುವಾದ ಮಾಡಿದರು. ಇಂಗ್ಲಿಷ್‌ನಲ್ಲಿ ಪ್ರಕಟಿಸಿದ ಪ್ರಕಾಶಕರಿಗೆ ಈ ಪುಸ್ತಕದಿಂದ ₹ 6 ಕೋಟಿ ವ್ಯವಹಾರವಾಗಿದೆ ಎಂದರೆ ಇಂಗ್ಲಿಷ್ ಪುಸ್ತಕ ಸಂಸ್ಕೃತಿ ಹೇಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಬುಕರ್ ಪ್ರಶಸ್ತಿ ಬಂದಿರುವುದರಿಂದ ಈ ಕೃತಿಯು ಜಗತ್ತಿನ 35 ಭಾಷೆಗಳಿಗೆ ಹಾಗೂ 12 ಭಾರತೀಯ ಭಾಷೆಗಳಿಗೂ ಅನುವಾದವಾಗಲಿದೆ. ಆಡಿಯೊ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ. ಸಿನಿಮಾ ಮಾಡುವ ಹಕ್ಕುಗಳನ್ನೂ ಪಡೆದಿದ್ದಾರೆ ಎಂದು ವಿವರಿಸಿದರು.
ನಿಮ್ಮಲ್ಲಿ ಧರ್ಮಕ್ಕೆ ಸಂಬಂಧಿಸಿದ ಕಲಹ ಹೆಚ್ಚು ಅಲ್ವ. ನಿಮಗೆ ಕಷ್ಟವಾಗುವುದಿದ್ದರೆ ಲಂಡನ್‌ಗೆ ಬನ್ನಿ. ವಸತಿ ವ್ಯವಸ್ಥೆ ಮಾಡುತ್ತೇವೆ ಎಂದು ಅಲ್ಲಿನವರು ಹೇಳಿದರು. ನಾನು ಬಡಿದಾಡಿಕೊಂಡು ಕರ್ನಾಟಕದಲ್ಲಿಯೇ ಬದುಕುತ್ತೇವೆ. ಇಲ್ಲಿ ಬರುವುದಿಲ್ಲ ಎಂದು ತಿಳಿಸಿದೆ ಎಂಬುದಾಗಿ ಬಾನು ಮುಷ್ತಾಕ್ ತಿಳಿಸಿದರು.
ಅಲ್ಲಿನವರು ಕನ್ನಡವನ್ನು ಕ್ಯಾನಡ ಎಂದು ಉಚ್ಛರಿಸುತ್ತಿದ್ದರು. ಕ್ಯಾನಡ ಅಲ್ಲ ಕ..ನ್ನ..ಡ.. ಎಂದು ಪಾಠ ಮಾಡಿ ಬಂದೆ ಎಂದು ವಿವರಿಸಿದರು.
ವಿಚ್ಛಿದ್ರಕಾರಿ ಶಕ್ತಿಗಳು, ಮತಾಂಧತೆ ಹಾಗೂ ಮೂಲಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ ಬಾನು ಮುಷ್ತಾಕ್ ಅವರಿಗೆ ಮಾನವೀಯತೆಯ ಮತ್ತು ಭಾರತೀಯತೆಯ ಬೆಸುಗೆಯ ಪ್ರತೀಕವಾಗಿ ಬುಕರ್ ಪ್ರಶಸ್ತಿ ಬಂದಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ತಿಳಿಸಿದರು.
ಸಾಹಿತ್ಯದ ಹೆಸರಿನಲ್ಲಿ ಕೊಡುತ್ತಿರುವ ಈ ಸಂದೇಶವು, ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ. ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಎಂದು ಬಣ್ಣಿಸಿದರು.
ಪತ್ರಕರ್ತ ಜಿ.ಎನ್. ಮೋಹನ್ ಮಾತನಾಡಿ, ‘ಬಾಲ್ಯದಲ್ಲಿ ಬಾನು ಅವರನ್ನು ಅವರ ತಂದೆ ಕನ್ನಡ ಶಾಲೆಗೆ ಸೇರಿಸಲು ಹೋದಾಗ ಈ ಹುಡುಗಿಯನ್ನು ಉರ್ದು ಶಾಲೆಗೆ ಸೇರಿಸುವುದು ಬಿಟ್ಟು ಇಲ್ಲಿಗೆ ಕರೆ ತಂದಿದ್ದೀರಿ. ಕನ್ನಡ ಕಲಿಸಲು ಸಾಧ್ಯವೇ ಎಂದು ಶಾಲೆಯ ಶಿಕ್ಷಕರು ಪ್ರಶ್ನಿಸಿದ್ದರು. ನಾಲ್ಕನೇ ತರಗತಿಗೆ ಪ್ರವೇಶ ನೀಡಬೇಕಿದ್ದ ಮಗುವನ್ನು ಒಂದನೇ ತರಗತಿಯಲ್ಲಿ ಕೂರಿಸಿದ್ದರು. ಬಾನು ಅವರು ಆರೇ ತಿಂಗಳಲ್ಲಿ ಕನ್ನಡದ ಕಾಗುಣಿತಗಳನ್ನೆಲ್ಲ ಕಲಿತರು. ಆಗ ಅದೇ ಶಿಕ್ಷಕರು ಕೈ ಹಿಡಿದು ಕರೆದುಕೊಂಡು ಹೋಗಿ ನಾಲ್ಕನೇ ತರಗತಿಯಲ್ಲಿ ಕೂರಿಸಿದ್ದರು. ಇಂದು ಕನ್ನಡವನ್ನು ಜಗತ್ತೇ ನೋಡುವಷ್ಟು ಎತ್ತರಕ್ಕೆ ಒಯ್ದಿದ್ದಾರೆ’ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್. ಚನ್ನೇಗೌಡ, ಗಾಂಧಿ ಭವನದ ಎಚ್.ಸಿ. ದಿನೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.