
ಬೆಂಗಳೂರು: ಭಾರತೀಯ ಚರ್ಮೋದ್ಯಮ ಹಾಗೂ ಕೊಲ್ಹಾಪುರಿ ಚಪ್ಪಲಿಯ ಪರಂಪರೆ ಉತ್ತೇಜಿಸುವ ಉದ್ದೇಶದಿಂದ ಇಟಲಿಯ ಪ್ರಾದಾ ಕಂಪನಿ, ಲಿಡ್ಕಾಂ (ಸಂತ್ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಆ್ಯಂಡ್ ಚರ್ಮಕಾರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ) ಮತ್ತು ಲಿಡ್ಕರ್ (ಡಾ.ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಒಡಂಬಡಿಕೆ ಮಾಡಿಕೊಂಡಿವೆ.
ಮುಂಬೈನಲ್ಲಿ ನಡೆದ ಇಟಲಿ-ಭಾರತ ಬಿಸಿನೆಸ್ ಫೋರಂನಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಒಡಂಬಡಿಕೆ ಅನುಸಾರ ಪ್ರಾದಾ ಕಂಪನಿಯು ಲಿಡ್ಕಾಂ ಮತ್ತು ಲಿಡ್ಕರ್ ಸಹಯೋಗದಲ್ಲಿ ಸ್ಥಳೀಯವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದೆ. 40 ಆಯ್ದ ಪ್ರಾದಾ ಮಳಿಗೆಗಳಲ್ಲಿ ಮತ್ತು ಪ್ರಾದಾದ ಇ-ಕಾಮರ್ಸ್ ವೇದಿಕೆಗಳಲ್ಲಿ ಲಿಡ್ಕಾಂ ಮತ್ತು ಲಿಡ್ಕರ್ ಸಂಗ್ರಹವು ಜಾಗತಿಕವಾಗಿ 2026ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.
ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ವಸುಂಧರಾ, ‘ಕೊಲ್ಹಾಪುರಿ ಚಪ್ಪಲಿಗಳ ಪರಂಪರೆಯು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಲೆಮಾರುಗಳಿಂದ ಸಾಗಿ ಬಂದಿದೆ. ಈ ಜಿಐ ಟ್ಯಾಗ್ ಪಡೆದ ಕಲೆಯನ್ನು ರಕ್ಷಿಸುವುದು ಮತ್ತು ನಮ್ಮ ಕಲಾವಿದರನ್ನು ಪ್ರೋತ್ಸಾಹಿಸುವುದು ಮುಖ್ಯ. ಈ ಸಹಯೋಗವು ಕರ್ನಾಟಕದ ಕುಶಲಕರ್ಮಿಗಳಿಗೆ ಹೊಸ ಜಾಗತಿಕ ಅವಕಾಶಗಳನ್ನು ತೆರೆದಿದೆ’ ಎಂದರು.
ಪ್ರಾದಾ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಸಮೂಹ ಮುಖ್ಯಸ್ಥ ಲೊರೆಂಝೊ ಬರ್ಟೆಲ್ಲಿ, ಲಿಡ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪ್ರೇಮಾ ದೇಶಭ್ರತರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.