ADVERTISEMENT

ಅಪಹರಣ ಪ್ರಕರಣ : ಮಗು ಮಾರಾಟಕ್ಕೆ ಯತ್ನ

ಪೋಷಕರ ಮಡಿಲು ಸೇರಿದ ಭಾಗೇಶ್ * ಗಿರಿನಗರ ಪೊಲೀಸರ ಚುರುಕಿನ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 20:13 IST
Last Updated 18 ಮಾರ್ಚ್ 2019, 20:13 IST
ಭಾಗೇಶ್
ಭಾಗೇಶ್   

ಬೆಂಗಳೂರು: ಆಟೊ ಚಾಲಕನೊಬ್ಬ ಅಪಹರಿಸಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಿರುವ ಗಿರಿನಗರ ಪೊಲೀಸರು, ಆ ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸಿದ್ದಾರೆ.

ಗಿರಿನಗರ ಬಳಿಯಸ್ಕೈಲೈನ್ ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರು ಮಾ. 14ರಂದು ಬೆಳಿಗ್ಗೆ ಆಟವಾಡುತ್ತಿದ್ದ ಭಾಗೇಶ್ ಎಂಬ ಮಗುವನ್ನು ಚಾಲಕನೊಬ್ಬ ಆಟೊದಲ್ಲಿ ಅಪಹರಿಸಿಕೊಂಡು ಹೋಗಿದ್ದ. ಆ ಸಂಬಂಧ ಮಗುವಿನ ತಂದೆ ಚನ್ನಪ್ಪ ದೂರು ನೀಡಿದ್ದರು.

ಇನ್‌ಸ್ಪೆಕ್ಟರ್ ಸಿ.ಎ. ಸಿದ್ದಲಿಂಗಯ್ಯ ಹಾಗೂ ಪಿಎಸ್‌ಐ ವಿನಯ್ ನೇತೃತ್ವದ ತಂಡ ಮಗುವನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದೆ.

ADVERTISEMENT

ಆದರೆ, ಆರೋಪಿ ತಲೆಮರೆಸಿಕೊಂಡಿದ್ದಾನೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮಗುವಿನ ಅಪಹರಣದ ದೃಶ್ಯ ಆಧರಿಸಿ ತನಿಖೆ ಕೈಗೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

‘ಸಂಬಂಧಿಕರ ಮಗುವೆಂದು ಹೇಳಿ ಆರೋಪಿ ₹1.50 ಲಕ್ಷಕ್ಕೆ ಮಗುವನ್ನು ವ್ಯಕ್ತಿಯೊಬ್ಬರಿಗೆ ಮಾರಲು ಯತ್ನಿಸುತ್ತಿದ್ದ. ಮಗುವನ್ನು ವ್ಯಕ್ತಿ ಬಳಿ ಬಿಟ್ಟು ಹೋಗಿದ್ದ. ಇದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಂದೆ–ತಾಯಿ ಮೂಲಕವೇ ಮಗುವನ್ನು ಖರೀದಿಸುವುದಾಗಿ ಹೇಳಿದ್ದ ವ್ಯಕ್ತಿ, ಅವರನ್ನು ಕರೆದುಕೊಂಡು ಬರುವವರೆಗೂ ಹಣ ಕೊಡುವುದಿಲ್ಲವೆಂದು ಆರೋಪಿಗೆ ಹೇಳಿದ್ದರು. ಹೀಗಾಗಿ, ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ’ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.