
ಬೆಂಗಳೂರು: ‘ಬ್ರಾಹ್ಮಣ ಸಮುದಾಯವನ್ನೇ ವಿಭಜಿಸಿರುವ ಎಚ್.ಕಾಂತರಾಜು ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವು ಯಥಾವತ್ತು ಅಂಗೀಕರಿಸಬಾರದು. ಬದಲಾವಣೆ ಮಾಡದೇ ವರದಿ ಸ್ವೀಕರಿಸಿದರೆ ಸಮುದಾಯಕ್ಕೆ ಅನ್ಯಾಯವಾಗಲಿದೆ’ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದರು.
ನಗರದಲ್ಲಿ ಭಾನುವಾರ ವಿಶ್ವ ವಿಪ್ರತ್ರಯೀ ಪರಿಷತ್, ಎಚ್.ಕಾಂತರಾಜು ಆಯೋಗದ ವರದಿ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಆಯೋಗ ನೀಡಿರುವ ವರದಿಯನ್ನು ಅಂಗೀಕರಿಸುವುದಿದ್ದರೆ ಬ್ರಾಹ್ಮಣ ಸಮುದಾಯದ 44 ಉಪ ಜಾತಿಗಳನ್ನೂ ಒಟ್ಟಿಗೆ ಸೇರಿಸಬೇಕು. ಉಪ ಪಂಗಡಗಳನ್ನು ಬೇರ್ಪಡಿಸಿರುವ ವರದಿಗೆ ಬ್ರಾಹ್ಮಣ ಸಮುದಾಯದ ವಿರೋಧವಿದೆ’ ಎಂದು ಹೇಳಿದರು.
‘ಅನ್ಯ ಕಾರಣಕ್ಕೆ ಮತಾಂತರಗಳು ನಡೆದಿವೆ. ಅವರೆಲ್ಲರೂ ಬ್ರಾಹ್ಮಣರೆಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ, ಸಮೀಕ್ಷೆ ವೇಳೆ ಬ್ರಾಹ್ಮಣರಿಗೆ ಮಾತ್ರ ಸಂಖ್ಯೆ 200 ಎಂದು ನಮೂದಿಸಿ, ಉಳಿದವರಿಗೆ ಬೇರೆ ಸಂಖ್ಯೆ ನೀಡಲಾಗಿದೆ. ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸಗಳು ನಡೆದಿವೆ. ನಮ್ಮ ಸಮೀಕ್ಷೆಯಂತೆ ರಾಜ್ಯದಲ್ಲಿ 43 ಲಕ್ಷ ಬ್ರಾಹ್ಮಣ ಜನಸಂಖ್ಯೆಯಿದೆ. ಅದೇ ಆಯೋಗ ವರದಿಯಲ್ಲಿ 12 ರಿಂದ 13 ಲಕ್ಷ ಬ್ರಾಹ್ಮಣ ಜನಸಂಖ್ಯೆ ತೋರಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ’ ಎಂದರು.
‘ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಕಾಂತರಾಜು ಆಯೋಗದ ವರದಿಯನ್ನು ಅಂಗೀಕರಿಸಿದರೆ, ಆ ಮೀಸಲಾತಿ ಸೌಲಭ್ಯದಿಂದ ಬ್ರಾಹ್ಮಣರನ್ನು ವಂಚಿಸಿದಂತೆ ಆಗಲಿದೆ’ ಎಂದು ಹೇಳಿದರು.
‘ಬ್ರಾಹ್ಮಣರಲ್ಲೂ ಕಡುಬಡವರು ಹಾಗೂ ತುಳಿತಕ್ಕೆ ಒಳಗಾದವರಿದ್ದಾರೆ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯ ಕಾರಣಕ್ಕೆ ಸೌಲಭ್ಯಗಳು ದೊರೆಯುತ್ತಿಲ್ಲ. ಹಿಂದಿನ ಸರ್ಕಾರವು ಈ ಅವೈಜ್ಞಾನಿಕ ವರದಿಯನ್ನು ಜಾರಿಗೆ ತರುವುದಿಲ್ಲ ಎಂದು ಆಶ್ವಾಸನೆ ನೀಡಿತ್ತು. ಈಗಿನ ಸರ್ಕಾರವು ವರದಿ ಜಾರಿಗೊಳಿಸಲು ತರಾತುರಿಯಲ್ಲಿ ನಿಂತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮಾತನಾಡಿ, ‘ಹಿಂದೆ ಬ್ರಾಹ್ಮಣರು ಹಾಗೂ ಇತರೆ ವರ್ಗ ಎಂಬುದಾಗಿತ್ತು. ಆದರೆ, ಇಂದು ಇತರೆ ವರ್ಗಕ್ಕೆ ನಾವೇ ಸೇರಿದ್ದೇವೆ. ಆಯೋಗದ ವರದಿ ಸರಿಯಿದೆ ಎಂದು ಸಮುದಾಯದ ಮುಖಂಡರೇ ಹೇಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ಬಳಿಕ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರವು ಶೇ 10ರಷ್ಟು ಮೀಸಲಾತಿ ಕಲ್ಪಿಸಿತ್ತು. ಅದನ್ನೂ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಸಂವಿಧಾನಕ್ಕೆ ತಿದ್ದುಪಡಿ ತಂದಿರುವ ಕಾರಣಕ್ಕೆ ಭವಿಷ್ಯದಲ್ಲಿಯಾದರೂ ಸೌಲಭ್ಯ ಸಿಗಲಿದೆ’ ಎಂದು ಹೇಳಿದರು.
ಬಬ್ಬೂರುಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಎ.ವಿ.ಪ್ರಸನ್ನ ಮಾತನಾಡಿ, ‘ಆಯೋಗವು ಬ್ರಾಹ್ಮಣ ಸಮುದಾಯದ ಸಂಖ್ಯೆಯ ನಿರ್ಣಯ ಮಾಡುವಲ್ಲಿ ಲೋಪ ಎಸಗಿದೆ. ಮೊದಲೇ ನಮ್ಮ ಜನಸಂಖ್ಯೆ ಕಡಿಮೆಯಿತ್ತು. ಆಯೋಗವು ಮತ್ತಷ್ಟು ಕಡಿತಗೊಳಿಸಿದೆ’ ಎಂದು ಹೇಳಿದರು.
ಬ್ರಾಹ್ಮಣ ಸಮುದಾಯದ ನಾಯಕರನ್ನು ಅಧಿಕಾರದಿಂದ ದೂರವಿಡುವ ಕೆಲಸಗಳು ನಡೆಯುತ್ತಿವೆ. ಜತೆಗೆ ಈ ಸಮುದಾಯವನ್ನು ಬೇರೆ ಕ್ಷೇತ್ರಗಳಲ್ಲೂ ಕಡೆಗಣಿಸಿ ತುಳಿಯುವ ಕೆಲಸ ಮಾಡಲಾಗುತ್ತಿದೆ.
ಡಾ.ಎ.ವಿ. ಪ್ರಸನ್ನ ಅಧ್ಯಕ್ಷ ಬಬ್ಬೂರುಕಮ್ಮೆ ಸೇವಾ ಸಮಿತಿ
ಎಚ್.ಕಾಂತರಾಜು ಆಯೋಗದ ವರದಿ ಅಂಗೀಕರಿಸಿದರೆ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಕೇಂದ್ರವು ಕಲ್ಪಿಸಿರುವ ಮೀಸಲಾತಿ ಅಡಿ ಬ್ರಾಹ್ಮಣರಿಗೂ ಸೌಲಭ್ಯ ಕಡಿತವಾಗಲಿದೆ.
ಎನ್.ಕುಮಾರ್ ನಿವೃತ್ತ ನ್ಯಾಯಮೂರ್ತಿ ಹೈಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.