ADVERTISEMENT

ಬ್ರಾಹ್ಮಣ ಮಹಾಸಭೆ: ಕಾರ್ಯಕಾರಿಣಿ ಸಮಿತಿ ಪುನರ್‌ ರಚನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 20:34 IST
Last Updated 18 ಅಕ್ಟೋಬರ್ 2025, 20:34 IST
   

ಬೆಂಗಳೂರು: ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಕೇಂದ್ರ ಕಾರ್ಯಕಾರಿಣಿ ಸಮಿತಿಯನ್ನು ಬೈಲಾ ಪ್ರಕಾರ ಮುಂದಿನ ದಿನಗಳಲ್ಲಿ ಪುನರ್‌ ರಚನೆ ಮಾಡಲಾಗುವುದು’ ಎಂದು ಮಹಾಸಭೆಯ ಅಧ್ಯಕ್ಷ ಎಸ್. ರಘುನಾಥ್ ತಿಳಿಸಿದ್ದಾರೆ. 

‘ಹೆಚ್ಚುವರಿ ನೇಮಕಾತಿಗೆ ಸಂಬಂಧಿಸಿದಂತೆ ಮಹಾಸಭೆ ಉಪಾಧ್ಯಕ್ಷರಾಗಿದ್ದ ಕೆ. ಮೋಹನ್ ಅವರು ನೀಡಿದ ದೂರನ್ನು ಆಧರಿಸಿ, ಸಹಕಾರ ಇಲಾಖೆಯು ವಿಚಾರಣಾ ನೋಟಿಸ್ ನೀಡಿತ್ತು. ಈ ವಿಚಾರವಾಗಿ ಇದೇ 10 ಮತ್ತು 16ರಂದು ಜಿಲ್ಲಾ ಪ್ರತಿನಿಧಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರ ಜತೆಗೆ ಸಭೆ ನಡೆಸಲಾಗಿತ್ತು. ಎಲ್ಲ ಪದಾಧಿಕಾರಿಗಳ ನೇಮಕಾತಿಯನ್ನು ವಾಪಸ್ ಪಡೆದು, ಬೈಲಾ ಪ್ರಕಾರ ಮರು ನೇಮಕಾತಿ ಮಾಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಕೇಂದ್ರ ಕಾರ್ಯಕಾರಿಣಿ ಸಮಿತಿಯನ್ನು ಪುನರ್‌ ರಚಿಸಲು ಎಲ್ಲರೂ ಒಪ್ಪಿಗೆ ನೀಡಿದರು. ಅಲ್ಲದೆ, ಕೆ. ಮೋಹನ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆಗಳನ್ನು ನೀಡಿದರು’ ಎಂದು ರಘುನಾಥ್ ಹೇಳಿದ್ದಾರೆ. 

‘ಸಭೆಯ ತೀರ್ಮಾನದಂತೆ ಯಾವುದೇ ಪ್ರತಿಷ್ಠೆಗೆ ಒಳಗಾಗದೆ ಬೈಲಾ ಪ್ರಕಾರ ಕೇಂದ್ರ ಕಾರ್ಯಕಾರಿಣಿ ಸಮಿತಿಯನ್ನು ಪುನರ್ ರಚಿಸಲಾಗುವುದು. ಈ ಹಿಂದೆ ನೇಮಕ ಮಾಡಲಾಗಿರುವ ಮಹಾಸಭೆಯ ಕೇಂದ್ರ ಕಾರ್ಯಕಾರಿಣಿ ಸಮಿತಿಯ ನೇಮಕಾತಿ ಹಿಂಪಡೆಯಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.