ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರೋಧಿಸಿದ್ದು, ಇಡೀ ಪ್ರಕ್ರಿಯೆಯು ಹಲವು ನ್ಯೂನತೆಯಿಂದ ಕೂಡಿದೆ ಎಂದು ಆರೋಪಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ‘ಸಮೀಕ್ಷೆ ಕೈಪಿಡಿಯಲ್ಲಿ ಉಪಜಾತಿಗಳನ್ನು ಮುಖ್ಯಜಾತಿಯಾಗಿ ತೋರಿಸಲಾಗಿದೆ. ಎಲ್ಲ ಉಪಜಾತಿಗಳನ್ನು ಸೇರಿಸಿ, 1,561 ಹೊಸ ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಬ್ರಾಹ್ಮಣ ಎಂಬ ಶೀರ್ಷಿಕೆಯಡಿ ಸಮುದಾಯದ ಉಪಜಾತಿಗಳನ್ನು ತರದೆ, ಗೊಂದಲ ಸೃಷ್ಟಿಸಲಾಗಿದೆ. ಇದರಿಂದಾಗಿ ಸಮುದಾಯದವರ ಸಂಖ್ಯೆ ಚದುರಿ ಹೋಗುವ ಸಾಧ್ಯತೆಯಿದೆ. ಅಲ್ಲದೆ, ಕ್ರೈಸ್ತ ಬ್ರಾಹ್ಮಣರು, ಮುಜವರ್ ಮುಸ್ಲಿಂ ಬ್ರಾಹ್ಮಣರು, ವೇದವ್ಯಾಸ ಕ್ರೈಸ್ತ ಬ್ರಾಹ್ಮಣರು ಎಂಬ ಹೊಸ ಜಾತಿಗಳನ್ನು ಆಯೋಗ ಹುಟ್ಟು ಹಾಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಚುನಾವಣಾ ಆಯೋಗದ ಮತದಾರರ ಪಟ್ಟಿಯಂತೆ ಸಮೀಕ್ಷೆ ನಡೆಸುವ ಬದಲು, ವಿದ್ಯುತ್ ಮೀಟರ್ ಸಂಖ್ಯೆ ಪ್ರಕಾರ ಸಮೀಕ್ಷೆ ನಡೆಸಲು ತಯಾರಿ ನಡೆಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸದ ಕಾರಣ ಎಷ್ಟೋ ಜನರು ಮನೆಗಳಿಗೆ ಅಂಟಿಸಿದ ಚೀಟಿಗಳನ್ನು ಹರಿದು ಹಾಕಿದ್ದಾರೆ. ಈ ಸಮೀಕ್ಷೆ ಕೈಗೊಳ್ಳುವ ಮೊದಲು ಎಲ್ಲ ಜಾತಿಗಳ ಮುಖಂಡರ ಸಭೆ ನಡೆಸಬೇಕಿತ್ತು. ಸಮೀಕ್ಷೆ ನಡೆಸಲು 17 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿದೆ. ದಸರಾ ರಜೆ ಇರುವ ಕಾರಣ ಜನರು ಬೇರೆಡೆಗೆ ತೆರಳಿರುತ್ತಾರೆ. ಇದು ಸಮೀಕ್ಷೆಗೆ ಸರಿಯಾದ ಸಮಯವಲ್ಲ’ ಎಂದರು.
‘ಬ್ರಾಹ್ಮಣ ಜನಾಂಗದಲ್ಲಿ ಹಲವರು ಬಡವರಿದ್ದಾರೆ. ನಮ್ಮ ಸಮುದಾಯವನ್ನು ಪಕ್ಕಕ್ಕೆ ಇಡದೆ, ಹಿಂದುಳಿದವರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಹೇಳಿದರು.
ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಜಾತಿಯ ಕಾಲಂನಲ್ಲಿ ಬ್ರಾಹ್ಮಣ ಎಂದು ಉಲ್ಲೇಖಿಸಬೇಕು. ಉಪಜಾತಿಯನ್ನು ನಮೂದಿಸಬೇಕಾದ ಅಗತ್ಯವಿಲ್ಲಎಸ್. ರಘುನಾಥ್ ಅಧ್ಯಕ್ಷ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.