ADVERTISEMENT

400 ವಿಪ್ರರಿಗೆ ಸ್ವ ಉದ್ಯಮ ನೇರ ಸಾಲ: ಅಸಗೋಡು ಜಯಸಿಂಹ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 14:01 IST
Last Updated 5 ನವೆಂಬರ್ 2025, 14:01 IST
<div class="paragraphs"><p>ಅಸಗೋಡು ಜಯಸಿಂಹ</p></div>

ಅಸಗೋಡು ಜಯಸಿಂಹ

   

ಬೆಂಗಳೂರು: ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ಗೆ 1,333 ಮಂದಿ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ 400 ಮಂದಿಗೆ ₹2 ಲಕ್ಷವರೆಗೂ ಸಾಲ ನೀಡಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ಧರಿಸಿದೆ.

‘ಈ ಯೋಜನೆಯಡಿ ಸಾಲ ಪಡೆದವರಿಗೆ ಶೇ 20ರಷ್ಟು ಸಹಾಯಧನ ಮಂಡಳಿಯಿಂದ ಸಿಗಲಿದೆ. ಶೇ 4ರ ಬಡ್ಡಿ ದರದಲ್ಲಿ ಉಳಿದ ಮೊತ್ತವನ್ನು 34 ಕಂತುಗಳಲ್ಲಿ ಪಾವತಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಹಂತ ಹಂತವಾಗಿ ಉಳಿದ ಅರ್ಜಿದಾರರಿಗೂ ಸಾಲ ನೀಡಲಾಗುತ್ತದೆ’ ಎಂದು ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕೇಂದ್ರ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುತ್ತಿರುವ ಸಮುದಾಯದ 100 ವಿದ್ಯಾರ್ಥಿಗಳಿಗೆ ₹1 ಲಕ್ಷ ನೆರವು ನೀಡುವ ಚಾಣಕ್ಯ ಆಡಳಿತ ತರಬೇತಿ ಯೋಜನೆಗೂ ಚಾಲನೆ ನೀಡಲಾಗುತ್ತಿದೆ. ಇದಲ್ಲದೇ ಸಾಂದಿಪಿನಿ ಯೋಜನೆಯಡಿ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗುತ್ತಿದೆ’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ 2018ರಲ್ಲಿ ಮಂಡಳಿ ಸ್ಥಾಪಿಸಿ ₹25 ಕೋಟಿ ನೀಡಿದ್ದರು. ಆ ನಂತರ ಯಡಿಯೂರಪ್ಪ ಅವರು ಬರೀ ₹6.25 ಕೋಟಿ ನೀಡಿ ತಾತ್ಸಾರ ಮಾಡಿದರು. ಬಸವರಾಜ ಬೊಮ್ಮಾಯಿ ಅವರು ₹9.25 ಕೋಟಿ ನೀಡಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಡಳಿಗೆ ಹೆಚ್ಚಿನ ಅನುದಾನ ನೀಡಿದೆ. ಈಗ ವಾರ್ಷಿಕವಾಗಿ ₹10 ಕೋಟಿ ಅನುದಾನ ಸಿಗುತ್ತಿದ್ದು, ₹25 ಕೋಟಿ ನೀಡುವಂತೆ ಬೇಡಿಕೆ ಇಡಲಾಗಿದೆ’ ಎಂದರು.

ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ, ಸದಸ್ಯರಾದ ಮಾಲತೇಶ್‌, ವೆಂಕೋಬರಾವ್‌, ಶ್ರೀನಿವಾಸಮೂರ್ತಿ ಹಾಜರಿದ್ದರು.

ಆಚಾರ್ಯತ್ರಯರ ಜಯಂತಿ 

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯಿಂದ ಆಚಾರ್ಯತ್ರಯರ ಜಯಂತಿಯನ್ನು ನ.7ರ ಬೆಳಗ್ಗೆ 10.30ಕ್ಕೆ ಶೇಷಾದ್ರಿ ರಸ್ತೆಯ ಬಬ್ಬೂರು ಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಚಿವ ಕೃಷ್ಣಬೈರೇಗೌಡ ಜಯಂತಿ ಉದ್ಘಾಟಿಸುವರು. ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆ ವಹಿಸುವರು ಎಂದು ಅಸಗೋಡು ಜಯಸಿಂಹ ತಿಳಿಸಿದರು. ಶಂಕರಾಚಾರ್ಯರ ಕುರಿತು ಬೆಳವಾಡಿ ಮಂಜುನಾಥ ರಾಮಾನುಜಾಚಾರ್ಯರ ಕುರಿತು ಶೆಲ್ವಪಿಳ್ಳೈ ಅಯ್ಯಂಗಾರ್‌ ಮಧ್ವಾಚಾರ್ಯರ ಕುರಿತು ವ್ಯಾಸನಕೆರೆ ಪ್ರಭಂಜನಾಚಾರ್ಯ ಉಪನ್ಯಾಸ ನೀಡುವರು. ಬಿ.ವಿ.ಆಚಾರ್ಯ ಡಾ.ಎನ್‌.ಅನಂತರಾಮನ್‌ ಡಾ.ಶ್ರೀನಾಥ ಆರ್‌.ವಿ.ಜಾಗೀರದಾರ್‌ ಕ್ಯಾಪ್ಟನ್ ಗೋಪಿನಾಥ್‌ ಬಿ.ಕೆ.ಅನಂತರಾವ್‌ ರಘೋತ್ತಮ ಕೊಪ್ಪರ್‌ ಗಂಗಮ್ಮ ಕೇಶವಮೂರ್ತಿ ತ್ರಿವೇಣಿ ಬಾಯಿ ನರಸಿಂಹಮೂರ್ತಿ ನಾರಾಯಣ ರಾಘವ ವಿಷ್ಣು ಬಾಳೇರಿ ಬಿ.ಎಸ್‌.ಜಯಪ್ರಕಾಶ ನಾರಾಯಣ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.