
ನಗರದ ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ತತ್ವಜ್ಞಾನಿಗಳ ದಿನಾಚರಣೆ ಪ್ರಯುಕ್ತ ಆಚಾರ್ಯತ್ರಯರ ಜಯಂತ್ಯುತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ
ಬೆಂಗಳೂರು: ‘ಪ್ರಬಲ ಜಾತಿಗಳು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಾಜಕೀಯ ಅಧಿಕಾರ, ಸರ್ಕಾರದ ಹೆಚ್ಚಿನ ಸೌಲಭ್ಯಗಳು ಸಿಗುತ್ತಿದ್ದು, ಬ್ರಾಹ್ಮಣರೂ ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಆಚಾರ್ಯತ್ರಯರ ಜಯಂತಿ, ವಿಪ್ರ ನೇರ ಸಾಲ ಯೋಜನೆ, ಚಾಣಕ್ಯ ಆಡಳಿತ ತರಬೇತಿ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
‘ಬ್ರಾಹ್ಮಣರಿಗೆ ಸಮಸ್ಯೆಯೇ ಇಲ್ಲ ಎನ್ನುವುದು ತಪ್ಪು. ಈ ಸಮಾಜದಲ್ಲೂ ಬಡವರು, ನಿರುದ್ಯೋಗಿಗಳು ಇದ್ಧಾರೆ. ಅವರ ಬದುಕಿಗೆ ನೆಲೆ ನೀಡಲು ಯೋಜನೆಗಳನ್ನು ರೂಪಿಸಿ ಆರ್ಥಿಕ ಬಲ ತುಂಬಬೇಕಾಗಿದೆ. ಬ್ರಾಹ್ಮಣರ ಸಮಸ್ಯೆಗೆ ದನಿಯಾಗುವ ಪ್ರಯತ್ನ ಆಗಿಲ್ಲ ಎನ್ನುವ ಅಭಿಪ್ರಾಯವಿದೆ. ನಮ್ಮ ಸರ್ಕಾರ ಮಂಡಳಿಗೆ ಹೆಚ್ಚು ಅನುದಾನ ನೀಡಿ ಸಮುದಾಯದ ಪ್ರಗತಿಗೆ ನೆರವಾಗಲಿದೆ’ ಎಂದರು.
ಉಪನ್ಯಾಸ ನೀಡಿದ ಚಿಂತಕ ವ್ಯಾಸನಕೆರೆ ಪ್ರಭಂಜನಾಚಾರ್ಯ, ‘ಸರ್ಕಾರದಿಂದ ಶಂಕರ ಹಾಗೂ ರಾಮಾನುಜ ಜಯಂತಿ ಆಚರಿಸಿದರೂ ಮಧ್ವ ಜಯಂತಿಗೆ ಮಹತ್ವ ನೀಡಿಲ್ಲ. ಇವರಿಗೂ ಮಹತ್ವ ನೀಡಿದರೆ ಮೂವರು ಆಚಾರ್ಯರಿಗೂ ಸಮಾನ ಗೌರವ ನೀಡಿದಂತೆ ಆಗಲಿದೆ’ ಎಂದು ಹೇಳಿದರು.
ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರಿ ಹಾಜರಿದ್ದರು. ಶೆಲ್ವಪಿಳ್ಳೈ ಅಯ್ಯಂಗಾರ್ ಉಪನ್ಯಾಸ ನೀಡಿದರು.
ಇದೇ ವೇಳೆ ಸಮಾಜದ ಸಾಧಕರಾದ ಬಿ.ವಿ.ಆಚಾರ್ಯ, ಡಾ.ಎನ್.ಅನಂತರಾಮನ್, ಡಾ.ಶ್ರೀನಾಥ, ಆರ್.ವಿ.ಜಾಗೀರದಾರ್, ಕ್ಯಾಪ್ಟನ್ ಗೋಪಿನಾಥ್, ಬಿ.ಕೆ.ಅನಂತರಾವ್, ರಘೋತ್ತಮ ಕೊಪ್ಪರ್, ಗಂಗಮ್ಮ ಕೇಶವಮೂರ್ತಿ, ತ್ರಿವೇಣಿಬಾಯಿ, ನರಸಿಂಹಮೂರ್ತಿ ನಾರಾಯಣ, ರಾಘವ ವಿಷ್ಣು ಬಾಳೇರಿ, ಬಿ.ಎಸ್.ಜಯಪ್ರಕಾಶ ನಾರಾಯಣ ಅವರನ್ನು ಗೌರವಿಸಲಾಯಿತು. ವಿಪ್ರ ಸಾಲ ಯೋಜನೆಯ ಫಲಾನುಭವಿಗಳಿಗೆ ಪತ್ರ ವಿತರಿಸಲಾಯಿತು.
ಕಾಲೆಳೆಯುವುದನ್ನು ಬಿಡಿ: ದೇಶಪಾಂಡೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ ‘ಬ್ರಾಹ್ಮಣ ಸಮುದಾಯದಲ್ಲಿ ಸಂಘಟನೆ ಮಾಡಿ ಒಳ್ಳೆಯದು ಮಾಡಲು ಹೋದರೆ ಸಹಕಾರ ನೀಡುವುದಕ್ಕಿಂತ ಕಾಲು ಎಳೆಯುವವರು ಹೆಚ್ಚಿದ್ಧಾರೆ. ಇಂತಹವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಒಳ್ಳೆಯ ಕೆಲಸ ಮಾಡಿ. ಇತರೆ ಸಮುದಾಯಗಳಂತೆಯೇ ಸೌಲಭ್ಯವನ್ನು ಪಡೆದುಕೊಂಡು ಮುಂದೆ ಬನ್ನಿ’ ಎಂದು ಕಿವಿಮಾತು ಹೇಳಿದರು. ‘ಸಮುದಾಯದವರ ಪ್ರಗತಿಗೆಂದೇ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಸ್ಥಾಪಿಸಲು 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೆ. ಅವರು ಒಪ್ಪಿ ಅನುದಾನವನ್ನೂ ನೀಡಿದ್ದರು. ಮಂಡಳಿಯು ಯುವ ಸಮುದಾಯದವರಿಗೆ ಒತ್ತು ನೀಡಿ ಅವರ ಪ್ರಗತಿಗೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.