ADVERTISEMENT

ರಸ್ತೆಗೆ ‘ಬ್ರ್ಯಾಂಡ್‌ ಬೆಂಗಳೂರು’ ಅನುದಾನ

ಬಿಬಿಎಂಪಿ ಅನುದಾನದಲ್ಲೇ ಕಾಮಗಾರಿ; ಜೂನ್‌ ಅಂತ್ಯಕ್ಕೆ 389 ಕಿ.ಮೀ ರಸ್ತೆ ಅಭಿವೃದ್ಧಿ

ಆರ್. ಮಂಜುನಾಥ್
Published 6 ಡಿಸೆಂಬರ್ 2024, 0:28 IST
Last Updated 6 ಡಿಸೆಂಬರ್ 2024, 0:28 IST
ಜಾಲಹಳ್ಳಿಯಿಂದ ಪೀಣ್ಯ ರಸ್ತೆ ಹಾಳಾಗಿರುವುದು
ಜಾಲಹಳ್ಳಿಯಿಂದ ಪೀಣ್ಯ ರಸ್ತೆ ಹಾಳಾಗಿರುವುದು   

ಬೆಂಗಳೂರು: ನಗರದಲ್ಲಿರುವ ಮುಖ್ಯ, ಉಪ ಮುಖ್ಯ ರಸ್ತೆಗಳನ್ನು ಮುಂದಿನ ಮಳೆಗಾಲದ ವೇಳೆಗೆ ಪೂರ್ಣ ಸಿದ್ಧಗೊಳಿಸುವ ಉದ್ದೇಶದಿಂದ, ಎಲ್ಲ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ, ‘ಬ್ರ್ಯಾಂಡ್‌ ಬೆಂಗಳೂರು’ ಅನುದಾನವನ್ನು ಕಡಿತಗೊಳಿಸಲಾಗಿದೆ.

ಮುಖ್ಯ, ಉಪ ಮುಖ್ಯ ರಸ್ತೆಗಳಲ್ಲಿ ಅತಿಹೆಚ್ಚು ಗುಂಡಿಗಳಾಗಿದ್ದು, ಐದಾರು ವರ್ಷದಿಂದ ಸುಧಾರಣಾ ಕಾಮಗಾರಿ ಕೈಗೊಂಡಿರಲಿಲ್ಲ. ಗುಂಡಿಗಳನ್ನು ದುರಸ್ತಿ ಮಾಡಿದರೂ ಮತ್ತೆ ಗುಂಡಿಗಳಾಗುತ್ತಿದ್ದವು. ಹೀಗಾಗಿ, ಮೇಲ್ಮೈ ಪದರವನ್ನು ತೆರವುಗೊಳಿಸಿ ಡಾಂಬರೀಕರಣಗೊಳಿಸಲು ಬಿಬಿಎಂಪಿ ನಿರ್ಧರಿಸಿತ್ತು.

ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ವಿಭಾಗವಾರು ಟೆಂಡರ್‌ ಪ್ಯಾಕೇಜ್‌ಗಳನ್ನು ಆಹ್ವಾನಿಸಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗಡುವು ವಿಧಿಸಲಾಗಿದೆ. ಡಿಸೆಂಬರ್‌ 25ಕ್ಕೆ ಟೆಂಡರ್‌ ಅವಧಿ ಮುಕ್ತಾಯವಾಗಲಿದ್ದು, ನಂತರದ 15 ದಿನಗಳಲ್ಲಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಬಿಬಿಎಂಪಿ ಉದ್ದೇಶಿಸಿದೆ.

ADVERTISEMENT

ಬಿಬಿಎಂಪಿಯ ಮೂಲಸೌಕರ್ಯ ವಿಭಾಗದ ವತಿಯಿಂದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆಯಾ ವಲಯಗಳ ವತಿಯಿಂದಲೇ ಟೆಂಡರ್‌ ಆಹ್ವಾನಿಸಲಾಗಿದ್ದು, ಅದರ ನಿರ್ವಹಣೆಯನ್ನು ವಲಯಗಳಿಗೇ ವಹಿಸಲಾಗಿದೆ.

‘2025ರ ಮೇ ಅಂತ್ಯಕ್ಕೆ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅಲ್ಪಸ್ವಲ್ಪ ಸಮಸ್ಯೆಯಾದರೂ ಜೂನ್‌ ಅಂತ್ಯಕ್ಕೆ ಎಲ್ಲ ಕಾಮಗಾರಿ ಮುಗಿಸಲೇಬೇಕೆಂಬ ಉದ್ದೇಶವಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್ ತಿಳಿಸಿದರು.

ನಿಧಿ ಕಡಿತ: ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಅಭಿವೃದ್ಧಿ ಯೋಜನೆಗಾಗಿ ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಗೆ ನಿಗದಿಪಡಿಸಲಾಗಿರುವ ನಿಧಿಯನ್ನು ಕಡಿತಗೊಳಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಒಟ್ಟು ₹47.85 ಕೋಟಿ ಅನುದಾನ ಒದಗಿಸಲಾಗಿತ್ತು. ಹೆಚ್ಚುವರಿಯಾಗಿ ₹600 ಕೋಟಿ ಅನುದಾನದ ಅಗತ್ಯವಿತ್ತು. ಅದರಲ್ಲಿ ₹300 ಕೋಟಿಯನ್ನು ಬ್ರ್ಯಾಂಡ್‌ ಬೆಂಗಳೂರು– ಸುಗಮ ಸಂಚಾರ ಬೆಂಗಳೂರು, ವೈಬ್ರಂಟ್‌ ಬೆಂಗಳೂರು, ಆರೋಗ್ಯ ಬೆಂಗಳೂರು ವಿಭಾಗದ ಅನುದಾನದಲ್ಲಿ ಒದಗಿಸಲಾಗಿದೆ. ಉಳಿದ ₹360 ಕೋಟಿಯನ್ನು 2024–25ನೇ ಸಾಲಿನ ‘ಪರಿಷ್ಕೃತ ಆಯವ್ಯಯ’ದ ಇತರೆ ಶೀರ್ಷಿಕೆಗಳಿಂದ ಉಳಿತಾಯವಾಗುವ ಅನುದಾನದಲ್ಲಿ ಭರಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ.

‘ಸುಗಮ ಸಂಚಾರ’ಕ್ಕೆ ₹880 ಕೋಟಿ ಮೀಸಲಿರಿಸಲಾಗಿತ್ತು. ಇದರಲ್ಲಿ ಈ ಸಾಲಿನಲ್ಲಿ ₹730 ಕೋಟಿ ವೆಚ್ಚವಾಗಲಿದ್ದು, ಸುರಂಗ ರಸ್ತೆ ಯೋಜನೆಗೆ ಒದಗಿಸಿರುವ ₹200 ಕೋಟಿಯಲ್ಲಿ ₹100 ಕೋಟಿ ಹಾಗೂ ಕೆ–ರೈಡ್‌ ಯೋಜನೆ ಅನುದಾನದಲ್ಲಿ ₹50 ಕೋಟಿ ಸೇರಿದಂತೆ ಒಟ್ಟು ₹150 ಕೋಟಿ ಉಳಿತಾಯವಾಗಲಿದೆ. ಅದೇ ರೀತಿ, ‘ವೈಬ್ರಂಟ್‌ ಬೆಂಗಳೂರು’ನಲ್ಲಿ ₹265 ಕೋಟಿಯಲ್ಲಿ ₹90 ಕೋಟಿ ಉಳಿಯಲಿದೆ, ‘ಆರೋಗ್ಯ ಬೆಂಗಳೂರು’ನಲ್ಲಿ ₹215 ಕೋಟಿ ಉಳಿತಾಯ ನಿರೀಕ್ಷಿಸಿ, ಅದನ್ನು ರಸ್ತೆ ಅಭಿವೃದ್ಧಿಗೆ ವರ್ಗಾಯಿಸಲಾಗಿದೆ.

ಸುರಂಗ ರಸ್ತೆ ಅನುದಾನದಲ್ಲಿ ₹100 ಕೋಟಿ ಉಳಿತಾಯದ ನಿರೀಕ್ಷೆ ‘ಬ್ರ್ಯಾಂಡ್‌ ಬೆಂಗಳೂರು’ ಅನುದಾನದಿಂದ ₹300 ಕೋಟಿ ‘ಪರಿಷ್ಕೃತ ಆಯವ್ಯಯ’ದಂತೆ ಇತರೆ ಶೀರ್ಷಿಕೆಗಳಿಂದ ₹360 ಕೋಟಿ

ಅಭಿವೃದ್ಧಿ ಮಾದರಿ ವಿನ್ಯಾಸ

ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲು ಒಂದು ನಿಗದಿತ ಮಾದರಿ–ವಿನ್ಯಾಸ ಹಾಗೂ ಸುಧಾರಿತ ನಿರ್ವಹಣಾ ಪದ್ಧತಿಯನ್ನು ಸಿದ್ಧಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ. ಅದರಂತೆ ಈ ಕಾಮಗಾರಿಗಳನ್ನು ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

* ಹಾಳಾದ ರಸ್ತೆ ಮೇಲ್ಮೈಯನ್ನು ಮಿಲ್ಲಿಂಗ್‌ ಮಾಡುವುದು

* ರಸ್ತೆ ಬದಿ ಚರಂಡಿ ಇಲ್ಲದ ಪ್ರದೇಶಗಳಲ್ಲಿ ಎನ್‌.ಪಿ–3 ಪೈಪ್‌ ಅಳವಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಚರಂಡಿಯಿಂದ ಹೂಳನ್ನು ಸಂಪೂರ್ಣ ತೆರವುಗೊಳಿಸಿ ಚರಂಡಿ ಚಾವಣಿಯನ್ನು ಮರು ನಿರ್ಮಿಸುವುದು

* ರಸ್ತೆಯಿಂದ ಚರಂಡಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಗ್ರೇಟಿಂಗ್‌ ನಿರ್ಮಿಸುವುದು

* ಪಾದಚಾರಿ ಮಾರ್ಗವನ್ನು ಕಾಂಕ್ರೀಟ್‌ ತಳಪಾಯದೊಂದಿಗೆ ನಿರ್ಮಿಸುವುದು

* ರಸ್ತೆಬದಿ ರಸ್ತೆ ಲೈನ್‌ ಮತ್ತು ಪಾದಚಾರಿ ಮಾರ್ಗವನ್ನು ಗುರುತಿಸಲು ಕರ್ಬ್‌ ಸ್ಟೋನ್‌ಗಳನ್ನು ಅಳವಡಿಸಿ ಸಮತಟ್ಟು ಮಾಡುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.