ಬೆಂಗಳೂರು: ತ್ವರಿತ ಆರ್ಥಿಕ ಸುಧಾರಣೆಗಾಗಿ ನೀರಿನ ದರ ಪರಿಷ್ಕಣೆಯಂತಹ ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿ, ಈಗ ದೀರ್ಘಾವಧಿಯಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ‘ಹಸಿರು ಯೋಜನೆ’ಗಳ ಮೊರೆ ಹೋಗುತ್ತಿದೆ.
ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ(ಎಸ್‌ಟಿಪಿ) ಉತ್ಪತ್ತಿಯಾಗುವ ಒಳಚರಂಡಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಮತ್ತು ಮಾರಾಟ, ತ್ಯಾಜ್ಯವನ್ನು ಉತ್ಕೃಷ್ಟ ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡುವಂತಹ ಯೋಜನೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳುವುದು ಹಾಗೂ ಸೌರವಿದ್ಯುತ್ ಬಳಕೆ ಮೂಲಕ ವಿದ್ಯುತ್ ವೆಚ್ಚವನ್ನು ಕಡಿತಗೊಳಿಸುವಂತಹ ಯೋಜನೆಗಳ ಅನುಷ್ಠಾನಕ್ಕೆ ಜಲಮಂಡಳಿ ಸಿದ್ದತೆ ನಡೆಸಿದೆ.
ಪ್ರಸ್ತುತ ಜಲಮಂಡಳಿ 33 ಎಸ್‌ಟಿಪಿಗಳನ್ನು ಸ್ಥಾಪಿಸಿದ್ದು, ಇದರಲ್ಲಿ ಐದು ಎಸ್‌ಟಿಪಿಗಳಲ್ಲಿ ಒಳಚರಂಡಿ ತ್ಯಾಜ್ಯ ಬಳಸಿ ‘ಒತ್ತಿ ತುಂಬುವ ಜೈವಿಕ ಅನಿಲ’ (ಕಂಪ್ರೆಸ್ಡ್ ಬಯೋಗ್ಯಾಸ್–ಸಿಬಿಜಿ) ಉತ್ಪಾದಿಸಲಾಗುತ್ತಿದೆ. ಈಗ 50 ಎಂಎಲ್‌ಡಿಗಿಂತ ಮೇಲ್ಪಟ್ಟು ತ್ಯಾಜ್ಯ ನೀರು ಸಂಸ್ಕರಿಸುವ ಆರು ಎಸ್‌ಟಿಪಿಗಳನ್ನು ಗುರುತಿಸಿ, ಅಲ್ಲಿ ಜೈವಿಕ ಅನಿಲ ಉತ್ಪಾದಿಸಿ ಕಂಪನಿಗಳಿಗೆ ಮಾರಾಟ ಮಾಡಲು ಮಂಡಳಿ ಹೊಸ ಯೋಜನೆ ರೂಪಿಸಿದೆ. ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ)ಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
‘ಈಗಾಗಲೇ ಮೂಲಸೌಲಭ್ಯ ಅಭಿವೃದ್ಧಿ ಮಂಡಳಿ(ಐಡೆಕ್) ತಂಡದವರು ಆರು ಎಸ್‌ಟಿಪಿಗಳ ತಾಂತ್ರಿಕ ಮತ್ತು ಆರ್ಥಿಕ ಸಾಧ್ಯತೆ ಕುರಿತು ಅಧ್ಯಯನ ಮಾಡಿದ್ದಾರೆ. ಆ ವರದಿ ಆಧರಿಸಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿದ್ದೇವೆ. ಜೈವಿಕ ಅನಿಲಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಈ ಯೋಜನೆ ಕುರಿತು ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್) ಸೇರಿದಂತೆ ಕೆಲವು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಒಂದಷ್ಟು ಕಂಪನಿಗಳು ಆಸಕ್ತಿ ತೋರಿವೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಮಾಹಿತಿ ನೀಡಿದರು.
‘ಜೈವಿಕ ಅನಿಲವನ್ನು ಟ್ಯಾಂಕ್(ಬಾಟ್ಲಿಂಗ್) ಮೂಲಕ ಖರೀದಿಸಬಹುದು ಅಥವಾ ಘಟಕಗಳಿಂದ ಕೊಳವೆಗಳನ್ನು ಅಳವಡಿಸಿ ಅದರ ಮೂಲಕ ಸಮೀಪದಲ್ಲಿರುವ ಕಂಪನಿಯ ಕೊಳವೆ ಮಾರ್ಗಗಳಿಗೆ ಜೋಡಿಸಬಹುದು. ಜಲಮಂಡಳಿ ಗ್ಯಾಲನ್‌ಗೆ ಇಂತಿಷ್ಟು ದರ ಎಂದು ನಿಗದಿಪಡಿಸುತ್ತದೆ’ ಎಂದು ಅವರು ವಿವರಿಸಿದರು.
'ಈ ಯೋಜನೆಗೆ ಜಲಮಂಡಳಿ ಬಂಡವಾಳ ಹೂಡುವುದಿಲ್ಲ. ಎಲ್ಲವನ್ನೂ ಕಂಪನಿಯವರೇ ನಿರ್ವಹಿಸುತ್ತಾರೆ. ಒಪ್ಪಂದದ ಪ್ರಕಾರ ಆದಾಯದ ಪಾಲನ್ನು ಮಂಡಳಿಯೊಂದಿಗೆ ಹಂಚಿಕೊಳ್ಳುತ್ತಾರೆ. ಹೀಗಾಗಿ ಈ ಯೋಜನೆಯಿಂದ ಮಂಡಳಿಗೆ ಹೆಚ್ಚು ಲಾಭವಿದೆ’ ಎಂದು ರಾಮ್‌ಪ್ರಸಾತ್ ತಿಳಿಸಿದರು.
ತ್ಯಾಜ್ಯ ಗೊಬ್ಬರವಾಗಿಸಿ ಮಾರಾಟ: 'ಎಸ್‌ಟಿಪಿ ಘಟಕಗಳಲ್ಲಿ ಜೈವಿಕ ಅನಿಲ ಉತ್ಪಾದನೆಯ ನಂತರ ಉಳಿಯುವ ತ್ಯಾಜ್ಯವನ್ನು (Sludge) ಮಾರಾಟ ಮಾಡಲಾಗುತ್ತಿದೆ. ಆದರೆ ಅದನ್ನು ಇನ್ನಷ್ಟು ಉತ್ಕೃಷ್ಟಗೊಳಿಸಬೇಕಿದೆ. ತ್ಯಾಜ್ಯದಲ್ಲಿ ತೇವಾಂಶ ಹೆಚ್ಚಿರುತ್ತದೆ. ಅದನ್ನು ಸೌರವಿದ್ಯುತ್ ಆಧಾರಿತ ಡ್ರೈಯರ್‌ನಲ್ಲಿ ಒಣಗಿಸಿ, ಉತ್ಕೃಷ್ಟ ಗೊಬ್ಬರವಾಗಿಸಿ ಮಾರಾಟ ಮಾಡಲು ಜಲಮಂಡಳಿ ನೀಲನಕ್ಷೆ ಸಿದ್ದಪಡಿಸಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್ ಯೋಜನೆಯಡಿ ‘ಸೋಲಾರ್ ಬೇಸ್ಡ್ ಸ್ಲಡ್ಜ್ ಡ್ರೈಯರ್‘ ಎಂಬ ಕಾರ್ಯಕ್ರಮ ರೂಪಿಸಿದ್ದೇವೆ. ಖರ್ಚು ಕಡಿತಗೊಳಿಸಲು ಸೌರವಿದ್ಯುತ್ ಬಳಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಸೌರವಿದ್ಯುತ್ ಬಳಕೆ, ವೆಚ್ಚ ಕಡಿತ: ಪ್ರಸ್ತುತ ಜಲಮಂಡಳಿಯ ತಿಂಗಳ ವೆಚ್ಚದಲ್ಲಿ ಶೇಕಡ 70ರಷ್ಟು ವಿದ್ಯುತ್ ಶುಲ್ಕಕ್ಕೆ ವೆಚ್ಚವಾಗುತ್ತಿದೆ. ಈ ವೆಚ್ಚವನ್ನು ಕಡಿತಗೊಳಿಸಲು ಮಂಡಳಿಯ ವಿದ್ಯುತ್ ಆಧಾರಿತ ಕಾರ್ಯಾಚರಣೆಗಳಿಗೆ ನವೀಕರಿಸಬಹುದಾದ ಇಂಧನ ಬಳಸಲು ಯೋಜನೆ ರೂಪಿಸಲಾಗಿದೆ.
‘ಈ ಯೋಜನೆಯಡಿ ಈಗಾಗಲೇ ಸೌರಘಟಕ ಅಳವಡಿಸಿ ವಿದ್ಯುತ್ ಉತ್ಪಾದಿಸುತ್ತಿರುವವರಿಂದ ವಿದ್ಯುತ್ ಖರೀದಿಸುತ್ತೇವೆ. ಸೌರ ವಿದ್ಯುತ್ ದರಕ್ಕೆ ಹೋಲಿಸಿದರೆ ವಿದ್ಯುತ್ ಶುಲ್ಕ ತುಸು ದುಬಾರಿ. ಜಲಮಂಡಳಿಯಲ್ಲಿ ತಿಂಗಳಿಗೆ ಸುಮಾರು 9 ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ. ಯೂನಿಟ್ ಮೇಲೆ ಕನಿಷ್ಠ ₹1 ಉಳಿದರೂ, ಜಲಮಂಡಳಿಗೆ ತಿಂಗಳಿಗೆ ₹9 ಕೋಟಿ ಹಣ ಜಲಮಂಡಳಿಗೆ ಉಳಿತಾಯವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಲೆಕ್ಕಾಚಾರ ನೀಡಿದರು.
‘ಇದಲ್ಲದೇ, ಪಿಪಿಪಿ ಮಾದರಿಯಲ್ಲಿ ‘ಗ್ರೂಪ್ ಕ್ಯಾಪ್ಟಿವ್’ ಎಂಬ ಮತ್ತೊಂದು ಯೋಜನೆ ಸಿದ್ಧವಾಗಿದ್ದು, ಅದಿನ್ನೂ ಡಿಪಿಆರ್ ಹಂತದಲ್ಲಿದೆ. ಅದರಿಂದಲೂ ವಾರ್ಷಿಕವಾಗಿ ನೂರಾರು ಕೋಟಿ ಹಣ ಉಳಿತಾಯವಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಐದು ಎಸ್‌ಟಿಪಿಗಳಿಂದ ನಿತ್ಯ 50 ಸಾವಿರ ಕ್ಯೂಬಿಕ್ ಮೀಟರ್‌ನಷ್ಟು ಜೈವಿಕ ಅನಿಲ ಉತ್ಪಾದನೆಯಾಗುತ್ತಿದೆ. ಒಂದೆರಡು ಎಸ್‌ಟಿಪಿಗಳಲ್ಲಿ ಜೈವಿಕ ಅನಿಲದಿಂದ ವಿದ್ಯುತ್ ಉತ್ಪಾದಿಸಿ ಅದೇ ಎಸ್‌ಟಿಪಿಗಳ ಕಾರ್ಯನಿರ್ವಹಣೆಗೆ ಬಳಸಲಾಗುತ್ತಿದೆ. ಉಳಿದ ಘಟಕಗಳಲ್ಲಿ ಡೈಜಸ್ಟರ್‌ಗಳನ್ನು ಬಿಸಿ ಮಾಡಲು ಬೇಕಾದ ಬೆಂಕಿ ಉತ್ಪಾದಿಸಲು ಜೈವಿಕ ಅನಿಲವನ್ನು ಬಳಸಲಾಗುತ್ತಿದೆ. ಎಸ್‌ಟಿಪಿಗಳಿಗೆ ಬಳಸುವ ಒಟ್ಟು ವಿದ್ಯುತ್ತಿನಲ್ಲಿ ಶೇ 50ರಷ್ಟು ಪಾಲು ಜೈವಿಕ ಅನಿಲದಿಂದ ಉತ್ಪಾದಿಸಿದ ವಿದ್ಯುತ್ತಿನದು’ ಎಂದು ಜಲಮಂಡಳಿಯ ತಂತ್ರಜ್ಞರೊಬ್ಬರು ವಿವರ ನೀಡಿದರು.
·ನೀರಿನ ದರ ಪರಿಷ್ಕರಣೆಯೊಂದಿಗೆ ವಾರ್ಷಿಕ ₹500 ಕೋಟಿ ಆದಾಯದಲ್ಲಿ ಹೆಚ್ಚಳ ·
‘ಸಂಚಾರಿ ಕಾವೇರಿ’ – ಟ್ಯಾಂಕರ್ ಮೂಲಕ ಮನೆ ಮನೆಗೆ ಕಾವೇರಿ ನೀರು ಪೂರೈಕೆ
‘ಸರಳ ಕಾವೇರಿ’ ಯೋಜನೆ – ಹೊಸ ನೀರಿನ ಸಂಪರ್ಕಗಳನ್ನು ನೀಡಿ ’ಠೇವಣಿ‘ ಹೆಚ್ಚಿಸುತ್ತಿರುವುದು
ತ್ಯಾಜ್ಯ ನೀರು ಸಂಸ್ಕರಿಸಿ ಮಾರಾಟದಿಂದ ಆದಾಯ
ಇಂಧನ ಬಳಕೆ ತಗ್ಗಿಸುವುದು ಮತ್ತು ಹೆಚ್ಚುವರಿ ಇಂಧನ ಉತ್ಪಾದಿಸಿ ಮಾರಾಟ ಮಾಡುವುದು ಅಥವಾ ಮಂಡಳಿಯ ಎಸ್‌ಟಿಪಿ ಕಾರ್ಯನಿರ್ವಹಣೆಗೆ ಬಳಸುವುದು. ಇದರಿಂದ ಮಂಡಳಿಗೆ ಆರ್ಥಿಕವಾಗಿ ಅನುಕೂಲವಾಗುವ ಜೊತೆಗೆ ವೆಚ್ಚವೂ ಕಡಿಮೆಯಾಗುತ್ತದೆ ಪರಿಸ್ನೇಹಿಯಾಗಿರುತ್ತದೆ.ವಿ. ರಾಮ್‌ಪ್ರಸಾತ್ ಮನೋಹರ್ ಅಧ್ಯಕ್ಷ ಜಲಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.