ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಲಸೂರು ಕೆರೆಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಕೆರೆಯಲ್ಲಿ ತೇಲುವ ಸೇತುವೆ ನಿರ್ಮಾಣ, ದೋಣಿ ವಿಹಾರ, ಉದ್ಯಾನದ ಅಭಿವೃದ್ಧಿ, ನಡಿಗೆ ಪಥಗಳ ನಿರ್ಮಾಣ ಹಾಗೂ ಕೆರೆಯ ಸೌಂದರ್ಯೀಕರಣದ ಕಾಮಗಾರಿಗಳು ಭರದಿಂದ ಸಾಗಿವೆ. ಇದನ್ನು ನಗರದ ಜನರ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗುತ್ತಿದೆ.
ಅಂದಾಜು 106 ಎಕರೆಯಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆಯ ನಡುವೆ ಅಲ್ಲಲ್ಲಿ ನಡುಗಡ್ಡೆಗಳಿವೆ. ಅಲ್ಲಿ ಈಗಾಗಲೆ ಹಸಿರು ತುಂಬಿದ ಮರಗಳಿವೆ. ಇನ್ನಷ್ಟು ವಿಶಿಷ್ಟ ಪ್ರಭೇದದ ಗಿಡಗಳನ್ನು ನೆಡುವ ಮೂಲಕ ಪಕ್ಷಿಗಳನ್ನು ಸೆಳೆಯಲಾಗುತ್ತದೆ. ಇದಕ್ಕಾಗಿ ತಜ್ಞರ ನೇತೃತ್ವದಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇವು ಕೆರೆಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲಿವೆ.
ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ವಿವಿಧ ಕಾರ್ಯಕ್ರಮಗಳ ಮೂಲಕ ಕೆರೆ ಶುದ್ಧೀಕರಣ ಕಾರ್ಯ ಕೈಗೊಂಡಿವೆ. ಗುಣಮಟ್ಟದ ನಡಿಗೆ ಪಥಗಳನ್ನು ನಿರ್ಮಿಸಲಾಗುತ್ತಿದೆ. ಕೆರೆಯ ನಡುವೆ ಆಕರ್ಷಕ ಕಾರಂಜಿಗಳ ಅಳವಡಿಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಜನರ ವಿಹಾರಕ್ಕೆ ಪ್ರಶಸ್ತ ನೆಲೆಯನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ.
ಹಲಸೂರು ಕೆರೆಯಲ್ಲಿನ ಹೂಳು ತೆಗೆಯುವುದು, ದ್ವಿಪಥ ಪಾದಚಾರಿ ಮಾರ್ಗ ನಿರ್ಮಾಣ, ಕೆರೆಯ ಸುತ್ತಲೂ ತಡೆ ಗೋಡೆಯನ್ನು ನಿರ್ಮಿಸುವುದು ಸೇರಿದಂತೆ ₹30 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಇತ್ತೀಚೆಗೆ ಚಾಲನೆ ನೀಡಿದ್ದಾರೆ.
‘ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಕಲ್ಯಾಣಿಯ ಹಿಂಭಾಗದಲ್ಲಿರುವ ಒಳಚರಂಡಿಯ ಮೂಲಕ ಕಲುಷಿತ ನೀರು ಕೆರೆಯ ಒಡಲು ಸೇರದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಈ ಭಾಗದಲ್ಲಿನ ಹೂಳನ್ನು ತೆಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ. ಕೆರೆ ಸುತ್ತಲೂ ಇರುವ ತಡೆಗೋಡೆ ಶಿಥಿಲಗೊಂಡಿದ್ದು, ಅದನ್ನು ದುರಸ್ತಿ ಮಾಡಲಾಗುವುದು’ ಎಂದು ಶಾಸಕ ರಿಜ್ವಾನ್ ಅರ್ಷದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೆರೆಯ ನಡುಗಡ್ಡೆಗಳ ತಡೆಗೋಡೆ ಹಾಳಾಗಿದೆ. ಅವುಗಳನ್ನು ಪುನರ್ ನಿರ್ಮಿಸಲಾಗುವುದು. ಈ ನಡುಗಡ್ಡೆಗಳಿಗೆ ಹಿಂದೆ ದೇಶ–ವಿದೇಶಗಳ ಹಕ್ಕಿಗಳು ಬರುತ್ತಿದ್ದವು. ಆದರೆ ಈಗ ಬರುತ್ತಿಲ್ಲ. ಆದ್ದರಿಂದ ಈ ಹಕ್ಕಿಗಳನ್ನು ಆಕರ್ಷಿಲು ವಿವಿಧ ಬಗೆಯ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಇದರಿಂದ ಮತ್ತೊಮ್ಮೆ ಕೆರೆಯ ಗತ ವೈಭವವನ್ನು ಮರು ಸ್ಥಾಪಿಸಲಾಗುವುದು’ ಎಂದರು.
‘ಕೆರೆ ನೀರಿನಲ್ಲಿ ಆಮ್ಲಜನಕದ ಮಟ್ಟವನ್ನು ಸುಧಾರಿಸಲು ನಾಲ್ಕು ಏರೇಟರ್‌ಗಳನ್ನು ಅಳವಡಿಸಲಾಗುತ್ತದೆ. ಕೆರೆಯ ಸುತ್ತಲೂ ಆಲಂಕಾರಿಕ ದೀಪಗಳನ್ನು ಅಳವಡಿಸಲಾಗುತ್ತಿದೆ. ಯೋಗ ಮಾಡುವ ವೇದಿಕೆ ನಿರ್ಮಿಸುವುದೂ ಕೆರೆ ಪುನಾರಭಿವೃದ್ಧಿಯ ಯೋಜನೆಯಲ್ಲಿದೆ. ಕೆರೆಯ ಸುತ್ತಲೂ ತಂತಿಬೇಲಿ ಅಳವಡಿಕೆ, ಕೆರೆಗೆ ಪ್ರವೇಶ ಕಲ್ಪಿಸುವ ಎಲ್ಲ ಮುಖ್ಯದ್ವಾರಗಳನ್ನು ದುರಸ್ತಿ ಮಾಡಲಾಗುವುದು’ ಎಂದು ಹೇಳಿದರು.
‘ಹಲಸೂರು ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ರೂಪರೇಶೆಗಳನ್ನು ತಯಾರಿಸಲಾಗಿದೆ. ಈಗಾಗಲೇ ಪಾದಚಾರಿ ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಶೇಕಡಾ 80 ರಷ್ಟು ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಅಗತ್ಯ ಇರುವ ಕಡೆ ಮಾತ್ರ ಹೂಳು ತೆಗೆಯಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಚಿನ್ನಪ್ಪ ಗಾರ್ಡನ್ ಮತ್ತು ಜೀವನಹಳ್ಳಿ ಕಡೆಯಿಂದ ಕಲುಷಿತ ನೀರು ಹಲಸೂರು ಕೆರೆಯ ಒಡಲಿಗೆ ಸೇರುತ್ತಿದೆ. ಕೆರೆಯ ಮತ್ತೊಂದು ಬದಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ
(ಎಸ್‌ಟಿಪಿ) ನಿರ್ಮಾಣ ಮಾಡಲಾಗಿದೆ. ಆದರೆ, ಎಸ್‌ಟಿಪಿಗೂ ಮತ್ತು ರಾಜಕಾಲುವೆಗೂ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ, ಕಲುಷಿತ ನೀರು ನೇರವಾಗಿ ಕೆರೆ ಸೇರುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕು. ಒಟ್ಟಾರೆ ಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕು.
ಮೋಹನರಾಜ್ ಸುಬ್ಬಯ್ಯ, ಹಲಸೂರು ನಿವಾಸಿ
106 ಎಕರೆ-ಕೆರೆಯ ವಿಸ್ತೀರ್ಣ
₹ 30 ಕೋಟಿ-ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಿರುವ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.