ADVERTISEMENT

‘ಬ್ರ್ಯಾಂಡ್‌ ಬೆಂಗಳೂರು’ ಅಡಿ ಆರೋಗ್ಯ ಸೌಲಭ್ಯ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:20 IST
Last Updated 17 ಜನವರಿ 2025, 0:20 IST
<div class="paragraphs"><p>ಆಸ್ಪತ್ರೆ</p></div>

ಆಸ್ಪತ್ರೆ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆ ಅಡಿ ಬಿಬಿಎಂಪಿ ಆರೋಗ್ಯ ಇಲಾಖೆಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ADVERTISEMENT

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಬಿಬಿಎಂಪಿಯ ಈಗಿರುವ 13 ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆಗಳ ಮತ್ತು 5 ಆಸ್ಪತ್ರೆಗಳನ್ನು 50 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಅಲ್ಲದೇ, ಮೂರು ಆಸ್ಪತ್ರೆಗಳ ಹಳೆಯ ಕಟ್ಟಡಗಳನ್ನು ಹೊಸ ಕಟ್ಟಡಗಳ ನಿರ್ಮಾಣ ಮಾಡಲಾಗುವುದ. ಒಟ್ಟು ಹಾಸಿಗೆಗಳ ಸಂಖ್ಯೆಯನ್ನು 852ರಿಂದ 1,122ಕ್ಕೆ ಹೆಚ್ಚಿಸಲಾಗುವುದು ಎಂದರು.

ಅಲ್ಲದೇ, 26 ದಂತ ಚಿಕಿತ್ಸಾಲಯಗಳು, ಏಳು ಫಿಜಿಯೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇವುಗಳು ಸುಸಜ್ಜಿತ ವೈದ್ಯಕೀಯ ಉಪಕರಣಗಳನ್ನು ಹೊಂದಿರಲಿವೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಬೆಂಗಳೂರಿನ ನಾಗರಿಕರಿಗೆ ಹೆಚ್ಚುವರಿ ಉಪಯುಕ್ತ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ಇದಕ್ಕಾಗಿ ₹413.71 ಕೋಟಿ ವೆಚ್ಚ ಮಾಡುವ ಕ್ರಿಯಾ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಮನೆಗಳ ನಿರ್ಮಾಣ:

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ  ಸ್ಥಗಿತಗೊಳಿಸಿದ್ದ 61,894 ಮನೆಗಳ ನಿರ್ಮಾಣ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹2,643 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಪಾಟೀಲ ತಿಳಿಸಿದರು.

ಆನಂದರಾವ್‌ ವೃತ್ತದಲ್ಲಿ ಅವಳಿ ಗೋಪುರ

ಆನಂದರಾವ್‌ ವೃತ್ತದಲ್ಲಿರುವ ಎನ್‌.ಎಚ್‌.ಕಾಂಪೌಂಡ್‌ ಆವರಣದಲ್ಲಿರುವ 8.78 ಎಕರೆ ವಿಸ್ತೀರ್ಣ ನಿವೇಶನ ಲೋಕೋಪಯೋಗಿ ಇಲಾಖೆ ವಶಕ್ಕೆ ಪಡೆದು ಅವಳಿ ಗೋಪುರ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ.

ಇದಕ್ಕಾಗಿ ಆರ್ಥಿಕ ಹೂಡಿಕೆಗೆ ವ್ಯವಹಾರ ಸಲಹೆ ಗಾರರನ್ನು ನೇಮಕ ಮಾಡಿ ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಪ್ರಸ್ತಾವ ಮಂಡಿಸಲು ಸಂಪುಟ ಸಭೆ ನಿರ್ಣಯಿಸಿದೆ ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಜಾತಿವಾರು ಜನಗಣತಿ ವರದಿ ಮೇಲಿನ ಚರ್ಚೆ ಮುಂದೂಡಿಕೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನಗಣತಿ) ವರದಿ ಕುರಿತ ವಿಷಯ ಸಭೆಯ ಕಾರ್ಯಸೂಚಿಯಲ್ಲಿದ್ದರೂ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಿಲ್ಲ. ಆಡಳಿತಾತ್ಮಕ ಕಾರಣಕ್ಕಾಗಿ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು ಎಂದು ಎಚ್‌.ಕೆ.ಪಾಟೀಲ ಹೇಳಿದರು.

ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಮುಂದೂಡಿಕೆಗೆ ರಾಜಕೀಯ ಕಾರಣಗಳಿಲ್ಲ. ಸಂಪುಟ ಸಭೆಗೂ ಒಂದು– ಅಥವಾ ಎರಡು ಗಂಟೆಗೂ ಮುನ್ನ ಮುಚ್ಚಿದ ಲಕೋಟೆಯಲ್ಲಿರುವ ವರದಿಯನ್ನು ತೆರೆಯಬೇಕು. ಆ ಬಳಿಕ ಚರ್ಚೆ ಆಗಬೇಕು ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.