ADVERTISEMENT

Brand Bengaluru | ಅಂಗಾಂಗ ಕಸಿ; ಚಿಕಿತ್ಸೆ ಮಿಡಿದ ಬೆಂಗಳೂರು

ವರುಣ ಹೆಗಡೆ
Published 27 ನವೆಂಬರ್ 2024, 0:14 IST
Last Updated 27 ನವೆಂಬರ್ 2024, 0:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಸ್ತೆ ಅಪಘಾತ, ಗಂಭೀರ ಸ್ವರೂಪದ ಕಾಯಿಲೆಗಳು ಸೇರಿ ವಿವಿಧ ಸಂದರ್ಭದಲ್ಲಿ ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗ ದಾನದ ಬಗ್ಗೆ ಅವರ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿರುವ ನಗರದ ಆಸ್ಪತ್ರೆಗಳು, ಅಂಗಾಂಗ ವೈಫಲ್ಯಕ್ಕೊಳಗಾದವರಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಕಸಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಜೀವನದಲ್ಲಿ ಹೊಸ ಭರವಸೆ ಮೂಡಿಸುತ್ತಿವೆ. ಅತ್ಯಂತ ಕ್ಲಿಷ್ಟ ಮತ್ತು ಸವಾಲಿನ ಪ್ರಕರಣಗಳಲ್ಲೂ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸುವನಲ್ಲಿ ನಗರದ ಆಸ್ಪತ್ರೆಗಳು ಯಶಸ್ವಿಯಾಗುತ್ತಿವೆ.

ರೋಬೊಟಿಕ್, 3ಡಿ ಪ್ರಿಂಟಿಂಗ್, ಕೃತಕ ಬುದ್ಧಿಮತ್ತೆ ಸೇರಿ ವಿವಿಧ ಮುಂದುವರಿದ ತಂತ್ರಜ್ಞಾನಗಳನ್ನು ಇಲ್ಲಿನ ಆಸ್ಪತ್ರೆಗಳು ಅಳವಡಿಸಿ ಕೊಂಡಿರುವುದರಿಂದ, ದೇಶ–ವಿದೇಶಗಳ ಜನರೂ ಚಿಕಿತ್ಸೆ ಹಾಗೂ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಇಲ್ಲಿಗೆ ಬರಲಾರಂಭಿಸಿದ್ದಾರೆ. ತಜ್ಞವೈದ್ಯರು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿಂದಾಗಿ ಕಸಿ ಶಸ್ತ್ರಚಿಕಿತ್ಸೆಗಳು ಇಲ್ಲಿನ ಆಸ್ಪತ್ರೆಗಳಲ್ಲಿ ಸುಲಭ ಸಾಧ್ಯವಾಗುತ್ತಿವೆ. ಇದರಿಂದಾಗಿಯೇ ಇಲ್ಲಿನ ವೈದ್ಯಕೀಯ ವ್ಯವಸ್ಥೆಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆತಿದೆ.

ADVERTISEMENT

ರಾಜ್ಯ ಸರ್ಕಾರದ ಜತೆಗೆ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳೂ ಅಂಗಾಂಗ ದಾನ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುತ್ತಿವೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು (ಸೊಟ್ಟೊ) ಅಂಗಾಂಗ ಹಾಗೂ ಅಂಗಾಂಶವನ್ನು ಸಂಗ್ರಹಿಸಿ, ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮಾಡಿಸಲು ನೆರವಾಗುತ್ತಿದೆ. ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಸಮಯಕ್ಕೆ ಸರಿಯಾಗಿ ಕಸಿ ಮಾಡದಿದ್ದಲ್ಲಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿನ ಆಸ್ಪತ್ರೆಗಳ ವೈದ್ಯರೂ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿ, ಸಂಗ್ರಹಿಸಲಾದ ಅಂಗಾಂಗವನ್ನು ಸೊಟ್ಟೊ ಅಡಿ ಹೆಸರು ನೋಂದಾಯಿಸಿಕೊಂಡವರಿಗೆ ಕಸಿ ಶಸ್ತ್ರಚಿಕಿತ್ಸೆ ಮಾಡಿಸುತ್ತಿದ್ದಾರೆ.

390 ಅಂಗಾಂಗ ದಾನ: ಅಂಗಾಂಗ ದಾನ ಹಾಗೂ ಅಂಗಾಂಗ ಕಸಿಗೆ ನಗರವೇ ಕೇಂದ್ರ ಸ್ಥಾನವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಶೇ 90ಕ್ಕೂ ಅಧಿಕ ಅಂಗಾಂಗ ದಾನ ಹಾಗೂ ಕಸಿ ಪ್ರಕ್ರಿಯೆ ಬೆಂಗಳೂರಿನ ಆಸ್ಪತ್ರೆಗಳಲ್ಲಿಯೇ ನಡೆಯುತ್ತಿದೆ. ‌ಈ ವರ್ಷ ರಾಜ್ಯದಲ್ಲಿ 138 ಮಂದಿಯಿಂದ 390 ಅಂಗಾಂಗ ಹಾಗೂ 693 ಅಂಗಾಂಶಗಳನ್ನು ದಾನವಾಗಿ ಪಡೆದು, ವಿವಿಧ ಆಸ್ಪತ್ರೆಗಳಲ್ಲಿ ಕಸಿ ನಡೆಸಲಾಗಿದೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆ (ಐಗಾಟ್) ಸೇರಿ ವಿವಿಧ ಸರ್ಕಾರಿ ವೈದ್ಯಕೀಯ ಸಂಸ್ಥೆಗಳೂ ಸರ್ಕಾರಿ ಯೋಜನೆಗಳಡಿ ಕಸಿ ಶಸ್ತ್ರಚಿಕಿತ್ಸೆ ನಡೆಸುತ್ತಿವೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಅಡಿಯಲ್ಲಿ 400ಕ್ಕೂ ಅಧಿಕ ಆಸ್ಪತ್ರೆಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಆಸ್ಟರ್‌ ಆರ್‌.ವಿ., ಆಸ್ಟರ್ ಸಿಎಂಐ, ಸ್ಪರ್ಶ್‌, ನಾರಾಯಣ ಹೃದಯಾಲಯ, ಮಣಿಪಾಲ್, ಅಪೋಲೊ, ಫೋರ್ಟಿಸ್, ಕೊಲಂಬಿಯಾ ಏಷ್ಯಾ, ನಾರಾಯಣ ಹೆಲ್ತ್ ಸಿಟಿ ಹಾಗೂ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಗಳು ಅಂಗಾಂಗ ದಾನ ಹಾಗೂ ಕಸಿ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿವೆ.

ಕಸಿ ಶಸ್ತ್ರಚಿಕಿತ್ಸೆಗೆ ಅಂಗಾಂಗ ಸಾಗಿಸುತ್ತಿರುವುದು

ಅಂಗಾಂಗ ಸಾಗಣೆಗೆ ಸಂಚಾರ ವಿಭಾಗದ ಪೊಲೀಸರು ಸೇರಿ ವಿವಿಧ ಇಲಾಖೆಗಳು ನೆರವು ನೀಡುತ್ತಿರುವುದರಿಂದ ‘ಗ್ರೀನ್ ಕಾರಿಡಾರ್’ (ಶೂನ್ಯ ಸಂಚಾರ ದಟ್ಟಣೆ) ಮೂಲಕ ರಾಜ್ಯದ ವಿವಿಧೆಡೆಯಿಂದ ಅಂಗಾಂಗಗಳನ್ನು ತಂದು, ಕಸಿ ಮಾಡುವುದು ಸುಲಭವಾಗುತ್ತಿದೆ.

ಅಂಗಾಂಗ ದಾನದ ಬಗ್ಗೆ ಬೃಹತ್ ಜಾಗೃತಿ ಅಭಿಯಾನ ನಡೆದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅಂಗಾಂಗಗಳನ್ನು ದಾನ ಮಾಡಲು ಮುಂದಾಗುತ್ತಾನೆ. ಇದರಿಂದ ಅಗತ್ಯ ಇರುವವರಿಗೆ ಅಂಗಾಂಗ ಕಸಿ ನಡೆಸಬಹುದು
ಡಾ. ಮೋಹನ್‌ ಕೇಶವಮೂರ್ತಿ, ಫೋರ್ಟಿಸ್‌ ಆಸ್ಪತ್ರೆಯ ಯುರೋ-ಆಂಕೊಲಾಜಿ ವಿಭಾಗದ ನಿರ್ದೇಶಕ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ಹಾಗೂ ಕಸಿ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಜೀವ ಸಾರ್ಥಕತೆ ಹೊಂದಲು ಅಂಗಾಂಗ ದಾನಕ್ಕೆ ಮುಂದಾಗಬೇಕು
ಡಾ. ರವಿಕಿರಣ್ ಎಸ್.ಕೆ., ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ಹೆಪಟಾಲಜಿ ವಿಭಾಗದ ಮುಖ್ಯಸ್ಥ
ತೀವ್ರ ಮತ್ತು ದೀರ್ಘ ಕಾಲದ ಅಂಗಾಂಗ ವೈಫಲ್ಯಕ್ಕೆ ಅಂಗಾಂಗ ಕಸಿ ಸಹಕಾರಿ. ಅಂಗಾಂಗ ಕಸಿಗೆ ಬೇಡಿಕೆ ಹೆಚ್ಚುತ್ತಿದ್ದು ಹೊಂದಾಣಿಕೆಯಾಗುವ ರೋಗಿಗಳಿಗೆ ಕುಟುಂಬಸ್ಥರು ದಾನ ಮಾಡುತ್ತಿದ್ದಾರೆ
ಡಾ. ಸುನಿಲ್ ಕಾರಂತ್ ಮಣಿಪಾಲ್ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ
ಅಂಗಾಂಗ ಕಸಿ ರೋಗಿಗಳಿಗೆ ಹೊಸ ಭರವಸೆ ನೀಡುತ್ತಿದೆ. ಅಂಗಾಂಗ ದಾನ ಹೆಚ್ಚುತ್ತಿರುವುದರಿಂದ ರೋಗಿಗಳಿಗೆ ನಾಲ್ಕೈದು ತಿಂಗಳಲ್ಲಿ ಅಂಗಾಂಗಗಳು ಲಭ್ಯವಾಗುತ್ತಿವೆ
ಡಾ.ಭಗೀರಥ್ ರಘುರಾಮನ್,  ನಾರಾಯಣ ಹೆಲ್ತ್‌ನ ಹೃದಯ ಕಸಿ ವಿಭಾಗದ ನಿರ್ದೇಶಕ 

ನಗರದ 47 ಆಸ್ಪತ್ರೆಗಳಿಗೆ ಮಾನ್ಯತೆ

ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಇದು ಕಾನೂನುಬದ್ಧವಾಗಿದೆ. ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ ರಾಜ್ಯದ 70 ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಲಭ್ಯವಿದೆ. ಇವುಗಳಲ್ಲಿ ಬೆಂಗಳೂರಿನ 47 ಆಸ್ಪತ್ರೆಗಳು ಮಾನ್ಯತೆ ಪಡೆದಿವೆ.

ಅಂಗಾಂಗ ವಿಫಲರಾದವರು ಹಾಗೂ ಅಂಗಾಂಗ ದಾನ ಮಾಡಲು ಬಯಸುವವರು ದೂರವಾಣಿ ಸಂಖ್ಯೆ 080-23295636 ಅಥವಾ 9845006768ಕ್ಕೆ ಸಂಪರ್ಕಿಸಬಹುದು. 8 ಜೀವಗಳಿಗೆ ನೆರವಾಗುವ ಅವಕಾಶ ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ. ಒಬ್ಬ ದಾನಿಯು ಹೃದಯ ಮೂತ್ರಪಿಂಡ ಶ್ವಾಸಕೋಶ ಯಕೃತ್ತು ಸಣ್ಣ ಕರುಳು ಹಾಗೂ ಮೇದೋಜೀರಕ ಗ್ರಂಥಿಗಳ ದಾನದ ಮೂಲಕ 8 ಜೀವಗಳಿಗೆ ಹೃದಯದ ಕವಾಟ ಚರ್ಮ ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದು. ಅಂಗಾಂಗ ದಾನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಂಗಾಂಗ ದಾನ ಕಸಿಯ ಪ್ರಮುಖ ಪ್ರಕರಣಗಳು

  • ತೀವ್ರ ಜ್ವರದ ಕಾರಣ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಇದೇ ತಿಂಗಳು ದಾಖಲಾಗಿದ್ದ 43 ವರ್ಷದ ಇಲ್ಲಿನ ಬಡಗಿಯಿಂದ ಅಂಗಾಂಗ ದಾನ. ಐವರಿಗೆ ನೆರವಾದ ವ್ಯಕ್ತಿ 

  • ಅಂಗಾಂಗ ದಾನಿಗಳ ಕೊರತೆ ಕಾರಣ ಸೆಪ್ಟೆಂಬರ್‌ನಲ್ಲಿ ವ್ಯಕ್ತಿಯೊಬ್ಬರ ಯಕೃತ್ತನ್ನು (ಲಿವರ್) ವಿಭಾಗಿಸಿ ಇಬ್ಬರಿಗೆ ಯಶಸ್ವಿಯಾಗಿ ಕಸಿ ನಡೆಸಿದ ಸ್ಪರ್ಶ್ ಆಸ್ಪತ್ರೆ ವೈದ್ಯರು -ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನ 22 ವರ್ಷದ ಕ್ಯಾಬ್ ಚಾಲಕನಿಂದ ಕಳೆದ ವರ್ಷ ಅಂಗಾಂಗ ದಾನ. ಐವರಿಗೆ ನೆರವಾದ ವ್ಯಕ್ತಿ 

  • ಕಳೆದ ಮೇ ತಿಂಗಳಲ್ಲಿ ಮನೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ನಗರದ ಕಾಟನ್ ಪೇಟೆಯ 14 ವರ್ಷದ ಬಾಲಕಿಯಿಂದ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ. ಎಂಟು ಮಂದಿಗೆ ಅಂಗಾಂಗ ಕಸಿ

  • ಕಳೆದ ಮೇ ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 40 ವರ್ಷದ ವಿದೇಶಿ ಮಹಿಳೆಯಿಂದ ಸ್ಪರ್ಶ್‌ ಆಸ್ಪತ್ರೆಯಲ್ಲಿ ಅಂಗಾಂಗ ದಾನ. ಆರು ಮಂದಿಗೆ ನೆರವು  –ನಗರದ ಬಿಎಚ್ಇಎಲ್ ಬಡಾವಣೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ 15 ವರ್ಷದ ಬಾಲಕನಿಂದ ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ. ಇದರಿಂದ ಏಳು ರೋಗಿಗಳಿಗೆ ನೆರವು 

  • 2022ರ ಡಿಸೆಂಬರ್‌ನಲ್ಲಿ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಸುಡಾನ್‌ನ 63 ವರ್ಷದ ಮಹಿಳೆಗೆ ಪುತ್ರನಿಂದಲೇ ಮೂತ್ರಪಿಂಡ ದಾನ. ಇಲ್ಲಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ 

  • ಪಾರ್ಶ್ವವಾಯುವಿನಿಂದ ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲಾರದ 29 ವರ್ಷದ ಮಹಿಳೆಯೊಬ್ಬರಿಂದ 2022ರ ಸೆಪ್ಟೆಂಬರ್‌ನಲ್ಲಿ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ. ಎಂಟು ಮಂದಿಗೆ ನೆರವಾದ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.