
ಬೆಂಗಳೂರು: ‘ಸ್ತನ ಕ್ಯಾನ್ಸರ್ ಜಾಗೃತಿ ಮಾಸ’ದ ಅಂಗವಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಯು ನಗರದಲ್ಲಿ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಿತು.
‘ರೈಡ್ ಫಾರ್ ಎ ಕಾಸ್, ರ‍್ಯಾಲಿ ಫಾರ್ ಎ ಕ್ಯೂರ್’ ಶೀರ್ಷಿಕೆಯಡಿ ಜಾಗೃತಿ ರ್‍ಯಾಲಿ ನಡೆಸಿತು. ಆಸ್ಪತ್ರೆಯ ಆವರಣದಿಂದ ಪ್ರಾರಂಭವಾದ ಈ ರ್‍ಯಾಲಿಯಲ್ಲಿ, ಮಹಿಳಾ ಬೈಕ್ ಸವಾರರು ಮತ್ತು ಪಿಂಕ್ ಆಟೊ ರಿಕ್ಷಾ ಚಾಲಕಿಯರು ಪಾಲ್ಗೊಂಡಿದ್ದರು. ‘ಮಹಿಳೆಯರು ನಿಯಮಿತವಾಗಿ ಸ್ತನ ತಪಾಸಣೆಗೆ ಆದ್ಯತೆ ನೀಡಬೇಕು’ ಎಂಬ ಮಾಹಿತಿ ಫಲಕಗಳನ್ನು ಪ್ರದರ್ಶಿಸಿದರು.
ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ, ಕ್ಯಾನ್ಸರ್ ತಜ್ಞ ಡಾ. ರಾಹುಲ್ ಎಸ್. ಕನಕ, ‘ಮಹಿಳೆಯರು ಸ್ತನ ಕ್ಯಾನ್ಸರ್ ಲಕ್ಷಣದ ಬಗ್ಗೆ ತಿಳಿದಲ್ಲಿ ಮಾತ್ರ ರೋಗ ಉಲ್ಬಣ ತಡೆ ಸಾಧ್ಯ. ಆದ್ದರಿಂದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಬೇಕು. ಮಹಿಳೆಯರು ಆರೋಗ್ಯ ಕಡೆಗಣಿಸದೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.
ಹಿರಿಯ ವೈದ್ಯಕೀಯ ಸಲಹೆಗಾರ ಡಾ. ನೀಲೇಶ್ ರೆಡ್ಡಿ, ‘ಇತ್ತೀಚಿಗೆ ಸ್ತನ ಕ್ಯಾನ್ಸರ್ ಕೇವಲ ವಯಸ್ಸಾದ ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಾಗಿ ಉಳಿದಿಲ್ಲ. ಇದು ದೇಶದ ಯುವ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.