ADVERTISEMENT

ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ: ಜಲಮಂಡಳಿ ಮೀಟರ್‌ ರೀಡರ್ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 16:15 IST
Last Updated 20 ನವೆಂಬರ್ 2025, 16:15 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ₹10,000 ಲಂಚ ಪಡೆಯುತ್ತಿದ್ದ ವೇಳೆ, ಜಲಮಂಡಳಿಯ ಮೀಟರ್‌ ರೀಡರ್‌ ನರಸಿಂಹಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಡಿವಾಳ ನಿವಾಸಿ ಡೆಲ್ಸನ್‌ ಡಿಟ್ಟೊ ಅವರು, ತಮ್ಮ ಮನೆಯ ನೀರಿನ ಮೀಟರ್‌ನ ಬಿಲ್‌ ವಿಪರೀತ ಬರುತ್ತಿದೆ. ನೀರು ಬರದೇ ಇದ್ದ ಸಂದರ್ಭದಲ್ಲೂ ಮೀಟರ್ ಓಡಿದೆ. ಅದನ್ನು ಸರಿಪಡಿಸಿಕೊಡಿ ಎಂದು ಬಿಟಿಎಂ ಎರಡನೇ ಹಂತದ ಜಲಮಂಡಳಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆ ವ್ಯಾಪ್ತಿಯ ಮೀಟರ್ ರೀಡರ್‌ ನರಸಿಂಹಪ್ಪ, ‘ಮೀಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಅದನ್ನು ಸರಿಪಡಿಸಿ, ಬಿಲ್‌ ಕಡಿಮೆ ಬರುವಂತೆ ಮಾಡಿಕೊಡುತ್ತೇನೆ’ ಎಂದು ಅರ್ಜಿದಾರರಿಗೆ ಹೇಳಿದ್ದರು. ಜತೆಗೆ ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡೆಲ್ಸನ್‌ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಡೆಲ್ಸನ್‌ ಅವರು ಜಲಮಂಡಳಿ ಕಚೇರಿಗೆ ತೆರಳಿ, ನರಸಿಂಹಪ್ಪ ಅವರಿಗೆ ₹10,000 ನೀಡಿದ್ದರು. ಈ ವೇಳೆ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.