ADVERTISEMENT

ಸಿಸೇರಿಯನ್‌ಗೆ ಲಂಚ: ವೈದ್ಯ, ಸಿಬ್ಬಂದಿ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 0:06 IST
Last Updated 2 ಆಗಸ್ಟ್ 2023, 0:06 IST
   

ಬೆಂಗಳೂರು: ಬಡ ಮಹಿಳೆಯೊಬ್ಬರಿಗೆ ಸಿಸೇರಿಯನ್‌ ನಡೆಸಲು ಲಂಚ ಪಡೆದ ಆರೋಪದ ಮೇಲೆ ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ರಾಮಚಂದ್ರ ಮತ್ತು ವಾರ್ಡ್‌ ಬಾಯ್‌ (ಹೊರ ಗುತ್ತಿಗೆ ನೌಕರ) ವಾಹಿದ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮಂಜುಳಾ ಅವರಿಗೆ ಸಿಸೇರಿಯನ್‌ ನಡೆಸಲು ರಾಮಚಂದ್ರ ₹15,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜುಲೈ 15ರಂದು ಮಹಿಳೆಯ ಪತಿ ಮತ್ತು ಸಂಬಂಧಿಕರಿಂದ ₹10,000ವನ್ನು ವಾಹಿದ್‌ ಮೂಲಕ ಪಡೆಯಲಾಗಿತ್ತು. ಬಳಿಕ ಸಿಸೇರಿಯನ್‌ ನಡೆಸಲಾಗಿತ್ತು.

ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಮಹಿಳೆಯ ಪತಿ ಮತ್ತು ಸಂಬಂಧಿಕರು ಲೋಕಾಯುಕ್ತರ ಗಮನಕ್ಕೆ ತಂದಿದ್ದರು. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್‌ಪಿ ಎಂ. ಪ್ರದೀಪ್‌ ಕುಮಾರ್‌ ನೇತೃತ್ವದ ತಂಡ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಲಂಚದ ಹಣ ಪಡೆದುಕೊಂಡು, ಸಿಸೇರಿಯನ್‌ ಪೂರ್ಣಗೊಳಿಸಲಾಗಿತ್ತು. ವಾಹಿದ್‌ ಬಳಿಯಿಂದ ಹಣ ವಾಪಸ್‌ ಕೊಡಿಸಿದ್ದ ತನಿಖಾ ತಂಡ, ಈ ಕುರಿತು ವಾರ್ಡ್‌ಬಾಯ್‌ ಮತ್ತು ರಾಮಚಂದ್ರ ಮಧ್ಯದ ದೂರವಾಣಿ ಸಂಭಾಷಣೆಯನ್ನು ವಿಡಿಯೊ ರೆಕಾರ್ಡಿಂಗ್‌ ಮಾಡಿಕೊಂಡಿತ್ತು.

ADVERTISEMENT

ಲಂಚ ಪಡೆಯುವಾಗಲೇ ಬಂಧನ ಕಾರ್ಯಾಚರಣೆ ನಡೆಸಲು ಸಾಧ್ಯವಾಗದ ಕಾರಣದಿಂದ ಆರಂಭಿಕ ಹಂತದಲ್ಲಿ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ದೂರು ದಾಖಲಿಸಿ, ವಿಚಾರಣೆ ಆರಂಭಿಸಲಾಗಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು, ಜುಲೈ 25ರಂದು ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.