ADVERTISEMENT

ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್‌ಗೆ ಮುಖ್ಯಮಂತ್ರಿಯಿಂದ ಭೂಮಿಪೂಜೆ

ಜಾಗತಿಕ ಬಿಟಿ ಹಬ್ ಆಗಿ ರಾಜ್ಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 20:28 IST
Last Updated 29 ಜುಲೈ 2020, 20:28 IST
‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್‌’ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ವಿಶ್ವನಾಥ್ ಇದ್ದರು.
‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್‌’ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಭೂಮಿಪೂಜೆ ನೆರವೇರಿಸಿದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ವಿಶ್ವನಾಥ್ ಇದ್ದರು.   

ಬೆಂಗಳೂರು: ‘ರಾಜ್ಯವನ್ನು ಜಾಗತಿಕ ‘ಬಿಟಿ ಹಬ್’ ಆಗಿ ಹೊರಹೊಮ್ಮುವುದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್‌’ಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರ
ಗಳೆರಡೂ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ, ಈ ಎರಡೂ ಕ್ಷೇತ್ರಗಳಿಗೆ ಸರ್ಕಾರ ಮಹತ್ವ ನೀಡಲಿದೆ’ ಎಂದರು.

‘ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪರಿಧಿಯನ್ನು ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ಮತ್ತಷ್ಟು ವಿಸ್ತರಿಸಲಿದೆ. ಈ ಯೋಜನೆಗೆ ಸರ್ಕಾರ ₹ 150 ಕೋಟಿ ಅನುದಾನ ನೀಡಿದೆ. 150ಕ್ಕೂ ಹೆಚ್ಚು ಕಂಪನಿಗಳು ಈ ಪಾರ್ಕ್‌ನಲ್ಲಿ ನೆಲೆಗೊಳ್ಳಲಿವೆ. 100ಕ್ಕೂ ಹೆಚ್ಚು ನವೋದ್ಯಮಗಳುಸ್ಥಾಪನೆಯಾಗಲಿವೆ.ಇದರಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಸಿಗಲಿದೆ. ಬಿಟಿ ಕ್ಷೇತ್ರದಲ್ಲಿ ಏಷ್ಯಾದಲ್ಲಿ ಶೇ 9ರಷ್ಟು, ಭಾರತದಲ್ಲಿ ಶೇ 35ರಷ್ಟು ಮಾರುಕಟ್ಟೆ ಪಾಲು ಕರ್ನಾಟಕ ಹೊಂದಿದೆ ಎಂದರು.

ADVERTISEMENT

ಎರಡು ದಶಕಗಳ ಕನಸು: ‘ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗುವ ಸಮಯ ಬಂದಿದೆ. ಈಗಾಗಲೇ ಪ್ರಬಲವಾಗಿ ಹೊರಹೊಮ್ಮಿರುವ ರಾಜ್ಯ ಬಿಟಿ ಕ್ಷೇತ್ರಕ್ಕೆ ಈ ಪಾರ್ಕ್ ಮೂಲಕ ಮತ್ತಷ್ಟು ಬಲ ಬರಲಿದೆ’ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನ ಅಡಿಯಲ್ಲಿ ಆಗಲಿದೆ. ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್, ಶಾಸಕ ಎಂ. ಕೃಷ್ಣಪ್ಪ ಇದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಯೋಜನೆಯ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಬಿಟಿ ಕ್ಷೇತ್ರವನ್ನು ವಿಸ್ತರಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.