ADVERTISEMENT

2025ಕ್ಕೆ ಮೆಟ್ರೊ ವ್ಯಾಪ್ತಿಗೆ 300 ಕಿ.ಮೀ: ಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:21 IST
Last Updated 8 ನವೆಂಬರ್ 2019, 19:21 IST
ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ಬಿ.ಎಸ್‌.ಯಡಿಯೂರಪ್ಪ ವೀಕ್ಷಿಸಿದರು. ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್‌ ಇದ್ದಾರೆ.
ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ಬಿ.ಎಸ್‌.ಯಡಿಯೂರಪ್ಪ ವೀಕ್ಷಿಸಿದರು. ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್‌ ಇದ್ದಾರೆ.   

ಕೆಂಗೇರಿ: ‘ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ತಜ್ಞರ ಜೊತೆ ಚರ್ಚಿಸಿ ತ್ಯಾಜ್ಯ ವಿಲೇವಾರಿ ಸೇರಿದಂತೆ ಕೆರೆ ಅಭಿವೃದ್ಧಿ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಜಲಮಂಡಳಿ ವತಿಯಿಂದ ಹೆಮ್ಮಿಗೆಪುರ ವಾರ್ಡ್‍ನ ದೊಡ್ಡಬೆಲೆಯಲ್ಲಿ ನೂತನವಾಗಿ ನಿರ್ಮಿಸಿರುವ 40 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀರಿನ ಸಂಪನ್ಮೂಲಗಳ ದುರ್ಬಳಕೆ, ಜಾಗತಿಕ ತಾಪಮಾನ, ಕೈಗಾರೀಕರಣದಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಜಲ ಶುದ್ಧೀಕರಣ ಹಾಗೂ ಮರುಬಳಕೆ ಯೋಜನೆಗಳನ್ನು ಜರೂರಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರಿನ ತ್ಯಾಜ್ಯ ಹಾಗೂ ಕೊಳಚೆ ನೀರು ಸಂಸ್ಕರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಮೆಟ್ರೋ 2ನೇ ಹಂತ 2021 ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. 2025ರ ವೇಳೆಗೆ 300 ಕಿ.ಮೀ. ವರೆಗೆ ವಿಸ್ತರಿಸಲಾಗುತ್ತದೆ. 2020ರ ವೇಳೆಗೆ ಪೆರಿಫೆರಲ್ ರಿಂಗ್ ರಸ್ತೆ, ನಗರದ ಹೊರ ವರ್ತುಲ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿ ಕುಡಿಯುವ ನೀರು ಯೋಜನೆ, ಲೆಕ್ಕಕ್ಕೆ ಸಿಗದ ನೀರು ನಿಯಂತ್ರಣ ಯೋಜನೆಯನ್ನು 1500 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಜಲಮಂಡಲಿಯಿಂದ ಸಾರಕ್ಕಿ ಮತ್ತು ದೊಡ್ಡಬೆಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆಗೆ ವಿನಿಯೋಗಿಸಲಾಗುವುದು ಎಂದು ಹೇಳಿದರು.

ಐದು ಘಟಕಗಳಿಗೆ ₹130 ಕೋಟಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅಮೃತ್‌ ಯೋಜನೆಯಡಿ ₹130 ಕೋಟಿ ವೆಚ್ಚದಲ್ಲಿ ಐದು ಸಣ್ಣ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾಮಗಾರಿ ನಡೆಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 33.33ರಷ್ಟು, ರಾಜ್ಯ ಸರ್ಕಾರ ಶೇ 20ರಷ್ಟು ಅನುದಾನ ನೀಡಲಿದ್ದು, ಉಳಿದ ಮೊತ್ತವನ್ನು ಜಲಮಂಡಳಿ ಭರಿಸುತ್ತಿದೆ. ಇವುಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2020ರ ಅಂತ್ಯದಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಅಗರದಲ್ಲಿ 35 ದಶಲಕ್ಷ ಲೀಟರ್, ಸಾರಕ್ಕಿಯಲ್ಲಿ 5 ದಶಲಕ್ಷ ಲೀಟರ್‌ (ಪೂರ್ಣಗೊಂಡಿದೆ), ಚಿಕ್ಕಬೇಗೂರಿನಲ್ಲಿ 10 ದಶಲಕ್ಷ ಲೀಟರ್‌, ಕೆ.ಆರ್.ಪುರದಲ್ಲಿ 20 ಲಕ್ಷ ಲೀಟರ್ ಸಾಮರ್ಥ್ಯದ ಘಟಕಗಳು ನಿರ್ಮಾಣವಾಗುತ್ತಿವೆ.

‘2020ಕ್ಕೆ ನಾಲ್ಕು ಘಟಕ ಪೂರ್ಣ’
ಮೆಗಾಸಿಟಿ ರಿವಾಲ್ವಿಂಗ್‌ ನಿಧಿಯಡಿ ಒಟ್ಟು 440 ದಶಲಕ್ಷ ಲೀಟರ್‌ ಸಾಮರ್ಥ್ಯ ನಾಲ್ಕು ಹೊಸ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯ ಮೊತ್ತ ₹1,203 ಕೋಟಿ. ಈ ಯೋಜನೆಗೆ ಶೇ 50ರಷ್ಟನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯಿಂದ ಸಾಲ ರೂಪದಲ್ಲಿ ಪಡೆಯಲಾಗುತ್ತಿದೆ. ಕರ್ನಾಟಕ ಸರ್ಕಾರವು ಶೇ 25 ಅನುದಾನ ನೀಡಲಿದೆ. ಉಳಿದ ಮೊತ್ತವನ್ನು ಜಲಮಂಡಳಿ ಭರಿಸಲಿದೆ.

ಈ ಯೋಜನೆಯನ್ನು 2020ರ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಈ ಪೈಕಿ, ದೊಡ್ಡಬೆಲೆಯ 40 ಲಕ್ಷ ಲೀಟರ್ ಸಾಮರ್ಥ್ಯದ ಘಟಕದ ಕಾಮಗಾರಿ ಪೂರ್ಣಗೊಂಡಿದೆ. ವೃಷಭಾವತಿ ಕಣಿವೆಯಲ್ಲಿ 150, ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆಯಲ್ಲಿ 150 ಹಾಗೂ ಹೆಬ್ಬಾಳದಲ್ಲಿ 100 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.