
ಕಲ್ಲಬಾಳು ಪೀಠಾಧ್ಯಕ್ಷ ಶಿವಾನಂದಶಿವಾಚಾರ್ಯ ಸ್ವಾಮೀಜಿ ಅವರು ಜನಜಾಗೃತಿ ಧರ್ಮ ಸಮಾವೇಶವನ್ನು ಉದ್ಘಾಟಿಸಿದರು.
ರಾಜರಾಜೇಶ್ವರಿನಗರ: ‘ಬಸವಣ್ಣ ಹೇಳಿದಂತೆ ಸತ್ಯ-ಧರ್ಮ, ನ್ಯಾಯದ ಮಾರ್ಗದಲ್ಲಿ ಸಾಗಬೇಕು. ಮನುಷ್ಯರಾಗಿ ಜೀವಿಸಿದಾಗ ಮಾತ್ರ ಜೀವನ ಸಾರ್ಥಕ‘ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಂಡೇ ಮಠದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾವೇಶ, ಶಿವದೀಕ್ಷೆ ಸಮಾರಂಭದಲ್ಲಿ ಗೌರವ ಗುರುರಕ್ಷೆ ಸ್ವೀಕರಿಸಿ ಮಾತನಾಡಿ, ಪೂಜೆ, ಪುರಸ್ಕಾರ, ಧರ್ಮ, ಸಂಸ್ಕೃತಿ ಮನೆಗೆ ಸೀಮಿತವಾಗದೆ ಮಾನವ ಧರ್ಮ ಉಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಬಾಳೆ ಹೊನ್ನೂರು ಎಡೆಯೂರು ಮಠದ ರೇಣುಕಾ ಶಿವಾಚಾರ್ಯಸ್ವಾಮೀಜಿ, ‘ವೀರಶೈವ-ಲಿಂಗಾಯತರು ಒಂದಾಗಬೇಕು. ಉಪಪಂಗಡ ತೊಲಗಬೇಕು. ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯ ಕಲಿಸಬೇಕು. ಅವರಲ್ಲಿ ಮಾನವೀಯತೆ, ಧರ್ಮ, ಸಂಸ್ಕೃತಿ ಮೈಗೂಡಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.
ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ, ‘ಸಮಾಜ ಸೇವೆ ಮಾಡುವವರೇ ನಿಜವಾದ ಸೇವಕರು. ಅವರಲ್ಲಿ ಕರುಣೆ, ಸ್ನೇಹ, ವಿಶಾಲಹೃದಯತೆ ಇರುತ್ತದೆ. ಅಂತಹ ಸಮಾಜ ಕಾಣಬೇಕಾದರೆ, ಧರ್ಮ ಉಳಿಸುವ ಕೆಲಸದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಎಂದರು.
ಬಂಡೆ ಮಠದ ಪೀಠಾಧ್ಯಕ್ಷ ಸಚ್ಚಿದಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಶಿವಗಂಗೆಯ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಕಾಡಸಿದ್ದೇಶ್ವರ ಪೀಠಾಧ್ಯಕ್ಷ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಕಲ್ಲಬಾಳು ಪೀಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ ಮಠದ ಪಟ್ಟದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಮಹಾಂತಲಿಂಗ ಮಠದ ಶಿವಾಚಾರ್ಯ ಸ್ವಾಮೀಜಿ, ಕನ್ನಲ್ಲಿಯ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಡದಿಯ ಹುಚ್ಚಪ್ಪ ಸ್ವಾಮೀಜಿ, ಶಾಸಕ ಎಸ್.ಟಿ.ಸೋಮಶೇಖರ್, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಬಿಡದಿ ನವೀನ್‍ಕುಮಾರ್, ಕನ್ನಲ್ಲಿ ಎಸ್.ಶಾಂತರಾಜು, ಎಸ್.ಆರ್.ಮೋಹನ್ ಕುಮಾರ್(ಮಂಜು), ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕೆ.ಎಸ್.ಮಂಜುನಾಥಯ್ಯ, ಸಿದ್ದಲಿಂಗಸ್ವಾಮಿ, ಎನ್.ನಂಜುಂಡೇಶ್ ಇದ್ದರು.