ಯಲಹಂಕ: ‘ತಾಯಿ ಹೆಸರಿನಲ್ಲಿ ಒಂದು ಗಿಡ’ (‘ಏಕ್ ಪೇಡ್ ಮಾ ಕೆ ನಾಮ್’) ಘೋಷವಾಕ್ಯದೊಂದಿಗೆ ಇಲ್ಲಿನ ಗಡಿಭದ್ರತಾ ಪಡೆ (ಎಸ್‌ಟಿಸಿ) ಬಿಎಸ್‌ಎಫ್ ತರಬೇತಿ ಕೇಂದ್ರ ವತಿಯಿಂದ ಕಾರಹಳ್ಳಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಜೀವನ್ ಮುಕ್ತಿ ಫೌಂಡೇಶನ್ ಹಾಗೂ ಎಚ್‌ಎಸ್‌ಆರ್ ನಾಗರಿಕರ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಎಸ್‌ಟಿಸಿ, ಬಿಎಸ್‌ಎಫ್ ಬೆಂಗಳೂರು ಕೇಂದ್ರದ ಐಜಿ ಸುಧೀಂದ್ರಕುಮಾರ್ ಸಿಂಗ್ ಮಾತನಾಡಿ, ‘ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಎಲ್ಲ ಬಿಎಸ್‌ಎಫ್ ಕೇಂದ್ರಗಳ ಆವರಣದಲ್ಲಿ 21 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡುವ ಗುರಿ ಇದೆ’ ಎಂದು ತಿಳಿಸಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಬಿ.ಎನ್.ಎಸ್. ರತ್ನಾಕರ್ ಮಾತನಾಡಿ, ‘ಫಲಕೊಡುವ ಸಸಿಗಳನ್ನು ನೆಡಲಾಗುತ್ತಿದೆ. ನೆಟ್ಟರೆ ಸಾಲದು, ಪೋಷಣೆ ಮಾಡುವ ಜವಾಬ್ದಾರಿಯೂ ಇರಬೇಕು’ ಎಂದು ಹೇಳಿದರು.
‘ಗಿಡ ನೆಡುವ ಅಭಿಯಾನದಡಿಯಲ್ಲಿ ಮೂರು ವರ್ಷಗಳಿಂದ ಮುಂಬೈ, ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ 3.20 ಲಕ್ಷ ಗಿಡಗಳನ್ನು ನೆಡಲಾಗಿದೆ. ಇಂದು ಬಿಎಸ್‌ಎಫ್ ಕೇಂದ್ರದ ಆವರಣದಲ್ಲಿ 38 ವಿವಿಧ ತಳಿಯ 400ಕ್ಕೂ ಹೆಚ್ಚು ಹಲಸಿನ ಗಿಡಗಳನ್ನು ನೆಡಲಾಗಿದೆ’ ಎಂದು ಮಾಹಿತಿ ನೀಡಿದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಪಾರ್ಥಸಾರಥಿ ನಾಯ್ಡು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.