
ಯಲಹಂಕ: ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮನೆಯ ಅವಶೇಷಗಳು, ಪಾತ್ರೆ, ದಿನಸಿ ಪದಾರ್ಥಗಳು, ಬಟ್ಟೆಗಳ ನಡುವೆ ಮಕ್ಕಳಿಗೆ ಊಟ ತಿನಿಸುತ್ತಿರುವ ತಾಯಿ...
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕ ಹೋಬಳಿ ಕೋಗಿಲು ಬಂಡೆ ಬಳಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯು
ಎಂಎಲ್) ಜಾಗದಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿದ ನಂತರ ಆ ಪ್ರದೇಶದಲ್ಲಿ ಕಂಡುಬಂದ ದೃಶ್ಯಗಳಿವು.
150ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಲಾ
ಗಿದ್ದು, 500ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಿವೆ. ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಪರಿಣಾಮ, ಮೈ ಕೊರೆಯುವ ಚಳಿ, ಬಿಸಿಲು ಹಾಗೂ ದೂಳಿನ ನಡುವೆ ಅವಶೇಷಗಳ ಮಧ್ಯದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳು, ವೃದ್ಧರು,
ಮಹಿಳೆಯರು, ಬಾಣಂತಿಯರ ಪಾಡು ಹೇಳತೀರದಾಗಿದೆ.
ಮನೆಗಳನ್ನು ಧ್ವಂಸಗೊಳಿಸಿರುವುದರಿಂದ ಮಹಿಳೆಯರು ಶೌಚಾಲಯಗಳಿಲ್ಲದೆ ತೊಂದರೆ
ಅನುಭವಿಸುವಂತಾಗಿದೆ. ಮಕ್ಕಳಿಗೆ ಹಾಲುಣಿಸಲು, ಬಟ್ಟೆಗಳನ್ನು ಬದಲಿಸಿಕೊಳ್ಳಲೂ ಸಹ ಸ್ಥಳವಿಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ವಾಸಿಸುತ್ತಿದ್ದವರಲ್ಲಿ ಬಹುತೇಕರು ಕೂಲಿಕಾರ್ಮಿಕರಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಪಡೆದಿರುವ ಸಾಲಗಳನ್ನು ತೀರಿಸುವುದು ಹೇಗೆಂದು ಚಿಂತೆಗೀಡಾಗಿದ್ದಾರೆ.
‘ನಿತ್ಯದ ಖರ್ಚು, ವೈದ್ಯಕೀಯ ಅಗತ್ಯಗಳು ಹಾಗೂ ತಾತ್ಕಾಲಿಕ ವಸತಿಗಾಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂದು ದಾರಿಕಾಣದೆ ದಿಕ್ಕು ತೋಚದಂತಾಗಿದೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ವಿದ್ಯಾರ್ಥಿಗಳು ಬಿಎ, ಬಿ.ಕಾಂ, ಎಲ್‌ಎಲ್‌ಬಿ ತರಗತಿಗಳಲ್ಲಿ ಕಲಿಯುತ್ತಿದ್ದಾರೆ. ಅವರ ಶಿಕ್ಷಣಕ್ಕೂ ತೊಂದರೆಯಾಗಿದೆ. ಮನೆಗಳನ್ನು ಧ್ವಂಸಗೊಳಿಸಿರುವುದರಿಂದ ವೈಯಕ್ತಿಕ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ಅವಶೇಷಗಳಡಿಯಲ್ಲಿ ಮುಚ್ಚಿಹೋಗಿವೆ’ ಎಂದು ಹಲವರು ದೂರಿದರು.
‘ಶುಕ್ರವಾರ ಬೆಳಗಿನ ಜಾವ ಮನೆಯಲ್ಲಿ ವಿದ್ಯುತ್ ಪೂರೈಕೆ ಇರಲಿಲ್ಲ. ಏಕಾಏಕಿ ಹಲವು ಜೆಸಿಬಿಗಳ ಸಮೇತ ನೂರಾರು ಪೊಲೀಸರೊಂದಿಗೆ ಬಂದ ಅಧಿಕಾರಿಗಳು, ಮನೆಯಲ್ಲಿ ಮಲಗಿದ್ದ ಮಕ್ಕಳನ್ನು ಎಬ್ಬಿಸಿ, ಅಡುಗೆ ಅನಿಲದ ಸಿಲಿಂಡರ್ ಆಫ್ ಮಾಡಲು ಹೇಳಿದರು. ನಂತರ ನಮ್ಮ ಮನೆಗಳನ್ನು ಉರುಳಿಸಿದರು. 25 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಫಾತಿಮಾ ಹೇಳಿದರು.
‘ಯಾವುದೇ ನೋಟಿಸ್ ನೀಡದೆ ರಾತ್ರಿ 3 ಗಂಟೆಗೆ ಏಕಾಏಕಿ ಜೆಸಿಬಿಗಳು, ನೂರಾರು ಪೊಲೀಸರು, ಫೈರ್ ಎಂಜಿನ್ ಹಾಗೂ ಆಂಬುಲೆನ್ಸ್‌ಗಳು ಬಂದವು. ಇದ್ದಕ್ಕಿದ್ದಂತೆ ನಮ್ಮ ಮನೆಗಳನ್ನು ನಾಶಗೊಳಿಸಿದರು. ಊಟ ಯಾರೋ ಕೊಡುತ್ತಾರೆ; ಆದರೆ ಉಡಲು ಬಟ್ಟೆ, ಮಲಗಲು ಜಾಗವಿಲ್ಲ. ಕೊರೆವ ಚಳಿಗಾಲದಲ್ಲಿ ನಮ್ಮ ಪರಿಸ್ಥಿತಿಯನ್ನು ಕೇಳುವವರಿಲ್ಲದಂತಾಗಿದೆ. ವೋಟ್‌ಗಾಗಿ ಎಲ್ಲರೂ ಬರುತ್ತಾರೆ. ಈಗ ಯಾರೂ ಇಲ್ಲ’ ಎಂದು ಹಸೀನಾ ಆಕ್ರೋಶ ವ್ಯಕ್ತಪಡಿಸಿದರು.
‘ಎಲ್ಲ ದಾಖಲೆ ಇದ್ದರೂ ಅಕ್ರಮವೇ?’
‘ಹಲವಾರು ರಾಜಕಾರಣಿಗಳು ನೂರಾರು ಎಕರೆ ಜಾಗಗಳನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ಫಾರ್ಮ್‌ಹೌಸ್ ಗೆಸ್ಟ್‌ಹೌಸ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ನಾವು ಕೇವಲ 10X15 ಅಡಿ ಅಥವಾ 15X15 ಅಡಿ ಜಾಗದಲ್ಲಿ ಶೀಟ್ ಮನೆಗಳನ್ನು ನಿರ್ಮಿಸಿಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಬೀದಿಗೆ ತಳ್ಳಿದ್ದಾರೆ’ ಎಂದು ಶ್ರೀನಿವಾಸಬಾಬು ದೂರಿದರು. ‘94ಸಿಸಿ ಹಕ್ಕುಪತ್ರ ಆಧಾರ್ ರೇಷನ್‌ಕಾರ್ಡ್ ಮತದಾರರ ಗುರುತಿನ ಚೀಟಿ ಸೇರಿ ಎಲ್ಲ ದಾಖಲೆಗಳನ್ನು ಹೊಂದಿದ್ದರೂ ಸಹ ನಮ್ಮ ಮನೆಗಳನ್ನು ಕೆಡವಿದ್ದಾರೆ. ಸರ್ಕಾರಕ್ಕೆ ಬಾಬಾಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಅರಿವಿದ್ದರೆ ಇಂತಹ ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಮತ್ತೆ ಮನೆಗಳನ್ನು ನಿರ್ಮಿಸಿಕೊಡುತ್ತೇವೆಂದು ಆಶ್ವಾಸನೆ ನೀಡಿದ್ದಾರೆಂದು ಕೆಲವು ನಾಯಕರು ಹೇಳಿದ್ದಾರೆ. ಮನೆಗಳನ್ನು ನಿರ್ಮಿಸಿಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಎಚ್ಚರಿಕೆ ನೀಡಿದರು. ಹಲವು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.