ADVERTISEMENT

ಸ್ಥಗಿತಗೊಂಡ ಕಾಮಗಾರಿ ಶೀಘ್ರ ಪುನರಾರಂಭ: ರಾಮಲಿಂಗಾ ರೆಡ್ಡಿ

ಹೊಸೂರು ರಸ್ತೆ– ರೂಪೇನ ಅಗ್ರಹಾರ ಸಂಪರ್ಕ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:29 IST
Last Updated 19 ನವೆಂಬರ್ 2019, 2:29 IST

ಬೆಂಗಳೂರು: ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ರೂಪೇನ ಅಗ್ರಹಾರ ಮತ್ತು ಹೊಸೂರು ರಸ್ತೆ ನಡುವಿನ ಸಂಪರ್ಕ ರಸ್ತೆ ಕಾಮಗಾರಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ. ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಹಾಗೂ ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಕಾಮಗಾರಿಗಳನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ರಾಮಲಿಂಗಾ ರೆಡ್ಡಿ ಹಾಗೂ ಆಯುಕ್ತರು ಭರವಸೆ ನೀಡಿದರು.

‘ಗುತ್ತಿಗೆದಾರರಿಗೆ ₹ 8 ಕೋಟಿ ಹಣ ಪಾವತಿ ಬಾಕಿ ಇದೆ. 2017ರಲ್ಲಿ ಈ ಕಾಮಗಾರಿಗೆ ಮಂಜೂರಾಗಿದ್ದರೂ ಇನ್ನೂ ಭೂಸ್ವಾಧೀನ ಪೂರ್ಣಗೊಂಡಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಬಿಬಿಎಂಪಿ ವತಿಯಿಂದ ರೂಪೇನ ಅಗ್ರಹಾರದಿಂದ ಹೊಸೂರು ರಸ್ತೆವರೆಗೆ 1 ಕಿ.ಮೀ ಉದ್ದದ 60 ಅಡಿ ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ರೂಪೇನ ಅಗ್ರಹಾರ ಹಾಗೂ ಹೊಸೂರು ರಸ್ತೆ ನಡುವೆ ಪ್ರಯಾಣದ ದೂರ 4 ಕಿ.ಮೀ.ಗಳಷ್ಟು ಕಡಿಮೆ ಆಗಲಿದೆ. ಈ ಹೊಸ ರಸ್ತೆ ಕಾಮಗಾರಿಗೆ ₹25 ಕೋಟಿ ಮಂಜೂರಾಗಿತ್ತು. ಬಿಬಿಎಂಪಿ ಶೇ 40ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದೆ.

‘ಗುತ್ತಿಗೆದಾರರು ಹಾಗೂ ರಸ್ತೆಗೆ ಜಾಗ ಬಿಟ್ಟು ಕೊಡಬೇಕಾದ ಆಸ್ತಿ ಮಾಲೀಕರ ಜೊತೆ ಮಂಗಳವಾರ ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಆಯುಕ್ತರು ಭರವಸೆ ನೀಡಿದರು.

‘ಈ ಹಿಂದೆ ಇಲ್ಲಿ ರಸ್ತೆ ಇರಲಿಲ್ಲ. ರೂಪೇನ ಅಗ್ರಹಾರ ಕೆರೆಯ ಪಕ್ಕದಲ್ಲಿ ಹೊಸ ರಸ್ತೆ ನಿರ್ಮಿಸಲು ಯೊಜನೆ ರೂಪಿಸಿದ್ದೆವು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಈ ಹಿಂದಿನ ಆದೇಶದ ಪ್ರಕಾರ ಈ ರಸ್ತೆ ರೂಪೇನ ಅಗ್ರಹಾರ ಕೆರೆಯ ಮೀಸಲು ಪ್ರದೇಶದಲ್ಲಿ ಬರುತ್ತಿದ್ದುದರಿಂದ ಹಾಗೂ ಗುತ್ತಿಗೆದಾರರಿಗೆ ಪಾವತಿ ವಿಳಂಬ ಆಗಿದ್ದರಿಂದ ಕಾಮಗಾರಿಸ್ಥಗಿತಗೊಂಡಿತ್ತು. ಶೀಘ್ರವೇ ಕಾಮಗಾರಿ ಮತ್ತೆ ಆರಂಭವಾಗಲಿದೆ’ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.