ADVERTISEMENT

ಬೆಂಗಳೂರು| ಬಿಟಿಎಂ ಲೇಔಟ್‌ನಲ್ಲಿ ಆರಂಭವಾಗದ ಕಾಮಗಾರಿ: ರಾಮಲಿಂಗಾರೆಡ್ಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 16:21 IST
Last Updated 8 ನವೆಂಬರ್ 2025, 16:21 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ 2024–25ನೇ ಸಾಲಿನಲ್ಲಿ ₹27 ಕೋಟಿ ವೆಚ್ಚದ ಕಾಮಗಾರಿಗಳು ಅನುಮೋದನೆಗೊಂಡಿದ್ದವು. ಅದರಲ್ಲಿ ಕೆಲವು ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಿದ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲ ಕಾಮಗಾರಿಗಳನ್ನು ಶುರು ಮಾಡಬೇಕು. ಜೆ.ಡಿ. ಮರ ಕಾಲೊನಿ, ಎನ್.ಎಸ್. ಪಾಳ್ಯ ವಾರ್ಡ್‌ಗಳ ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಸೂಚಿಸಿದರು.

ADVERTISEMENT

ಮಂದಗತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಆದರೂ ಕಾಮಗಾರಿ ಸರಿಯಾಗಿ ನಿರ್ವಹಿಸದಿರುವ ಪ್ರಕರಣಗಳಲ್ಲಿ ಟೆಂಡರ್‌ ರದ್ದುಪಡಿಸಿ ಮರುಟೆಂಡರ್‌ ಕರೆಯಿರಿ ಎಂದು ಹೇಳಿದರು.

ಹಿಂದಿನ ಆರ್ಥಿಕ ವರ್ಷಗಳಲ್ಲಿ ಕರೆಯಲಾಗಿರುವ ಟೆಂಡರ್‌ಗಳಲ್ಲಿ ಕಾಮಗಾರಿಗಳು ಸಮರ್ಪಕವಾಗಿ ಮುಗಿದ ನಂತರವೇ ಈ ಸಾಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಟೆಂಡರ್‌ ಕರೆಯಬೇಕು ಎಂದರು.

ಪಾದಚಾರಿ ಮಾರ್ಗದ ನಿರ್ವಹಣೆ ಸರಿ ಇಲ್ಲ. ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪಾದಚಾರಿ ಮೇಲ್ಸೇತುವೆಗಳು ಸರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಂಜಿನಿಯರ್‌ಗಳು ಬೈಕ್‌ನಲ್ಲಿ ಸಂಚರಿಸಿ ಎಲ್ಲ ಕಡೆ ಪರಿಶೀಲನೆ ನಡೆಸಿ ಸರಿಪಡಿಸಬೇಕು ಎಂದು ಸಲಹೆ ನೀಡಿದರು.

ಈಜಿಪುರ ಮೇಲ್ಸೇತುವೆ ಬಳಿ ಬೀದಿ ದೀಪಗಳನ್ನು ಅಳವಡಿಸಬೇಕು. ಮಡಿವಾಳ ಕೆರೆ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಒತ್ತು ಕೊಡಬೇಕು. ಅನಗತ್ಯವಾದ ಕಡೆ ವೈಟ್‌ಟಾಪಿಂಗ್ ರದ್ದುಗೊಳಿಸಿ ಕೆರೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸ ಬೇಕು ಎಂದರು. 

ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ರಾಚಪ್ಪ, ಜಂಟಿ ಆಯುಕ್ತ ಸತೀಶ್ ಬಾಬು, ಮುಖ್ಯಎಂಜಿನಿಯರ್‌ಗಳಾದ ಬಸವರಾಜ ಕಬಾಡೆ, ಕೆ.ವಿ. ರವಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.