ADVERTISEMENT

ಹಾಸ್ಟೆಲ್‌ ಅವ್ಯವಸ್ಥೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 18:47 IST
Last Updated 19 ಮಾರ್ಚ್ 2021, 18:47 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಿಸಿಎಂ ಹಾಸ್ಟೆಲ್‌ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಹಾಸ್ಟೆಲ್‌ನಲ್ಲಿ ಗುಣಮಟ್ಟದ ಊಟ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಹಾಸ್ಟೆಲ್‌ ವಾರ್ಡನ್‌ ಮತ್ತು ಬಿಸಿಎಂ ಹಾಸ್ಟೆಲ್‌ಗಳ ಜಿಲ್ಲಾ ಅಧಿಕಾರಿಯವರು ಸ್ಪಂದಿಸಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

‘ಗ್ರಂಥಾಲಯವನ್ನು ನಿಗದಿತ ಸಮಯಕ್ಕಿಂತ ಮೊದಲೇ ಮುಚ್ಚಲಾಗುತ್ತಿದೆ. ಸಂಜೆ 7ಗಂಟೆಯಿಂದಲೇ ಓದುವುದನ್ನು ನಿಲ್ಲಿಸಿ ಬಾಗಿಲು ಮುಚ್ಚಬೇಕು ಎನ್ನುತ್ತಾರೆ. ರಾತ್ರಿ 8.30ರ ನಂತರ ಹೋದರೆ ಬಾಗಿಲು ತೆಗೆಯುವುದೇ ಇಲ್ಲ’ ಎಂದು ಆರೋಪಿಸಿದರು.

ADVERTISEMENT

‘ಬೆಳಿಗ್ಗೆ ತರಗತಿಗೆ ಹೋಗಿ, ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಮುಗಿಸಿಕೊಂಡು ನಾವು ಗ್ರಂಥಾಲಯಕ್ಕೆ ಹೋಗುವುದೇ ಸಂಜೆ 6.30 ಆಗುತ್ತದೆ. ತರಗತಿಯ ಪಠ್ಯಕ್ರಮ ಮಾತ್ರ ಓದಬೇಕು, ಈ ಲೈಬ್ರರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅವಕಾಶ ಇಲ್ಲ ಎನ್ನುತ್ತಾರೆ. ನಮ್ಮ ಊರು ಬಿಟ್ಟು ಓದಲೆಂದೇ ಇಲ್ಲಿಗೆ ಬಂದಿದ್ದೇವೆ. ಅದಕ್ಕೂ ಅವಕಾಶ ಇಲ್ಲ ಎಂದರೆ ಹೇಗೆ’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

‘ಈ ಬಗ್ಗೆ ಪ್ರಶ್ನಿಸಿದರೆ ನೋಟಿಸ್ ನೀಡಲಾಗುತ್ತಿದೆ’ ಎಂದು ದ್ವಿತೀಯ ವರ್ಷದ ವಿದ್ಯಾರ್ಥಿಗಳು ದೂರಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಾಸ್ಟೆಲ್ ವಾರ್ಡನ್ ಮಂಜುಳಾ ಅವರನ್ನು ಸಂಪರ್ಕಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.