ADVERTISEMENT

ಬುದ್ಧನ ಅನುಯಾಯಿಗಳು ಬೌದ್ಧ ಧರ್ಮ ನಮೂದಿಸಿ: ಬೌದ್ಧ ದಾಖಲಾತಿ ಆಂದೋಲನ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 15:40 IST
Last Updated 19 ಸೆಪ್ಟೆಂಬರ್ 2025, 15:40 IST
ಮಾವಳ್ಳಿ ಶಂಕರ್
ಮಾವಳ್ಳಿ ಶಂಕರ್   

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬುದ್ಧನ ಅನುಯಾಯಿಗಳು ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು ನಮೂದಿಸಬೇಕು ಎಂದು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಮನವಿ ಮಾಡಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್, ‘ಅಸ್ಪೃಶ್ಯತೆ, ಅಪಮಾನಗಳನ್ನು ಎದುರಿಸಿದ್ದ ಬಿ.ಆರ್.ಅಂಬೇಡ್ಕರ್ ಅವರು, ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಅದರಂತೆ ಸಂವಿಧಾನದಲ್ಲಿಯೂ ಮೂಲ ಧರ್ಮಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಯಲು ಇಚ್ಛಿಸುವವರು, ಧರ್ಮದ ಕಾಲಂ 8ರ ಕ್ರಮ ಸಂಖ್ಯೆ 6ರಲ್ಲಿರುವ ಬೌದ್ಧ ಎನ್ನುವ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬಹುದು. ಜಾತಿ ಕಾಲಂ 9ರಲ್ಲಿ ಪರಿಶಿಷ್ಟ ಜಾತಿಯೆಂದು ಉಲ್ಲೇಖಿಸಿ, ಉಪಜಾತಿ ಕಾಲಂ 10ರಲ್ಲಿ ಮೂಲ ಜಾತಿ ನಮೂದಿಸಬಹುದು’ ಎಂದರು. 

‘ಪೂರ್ಣ ಪ್ರಮಾಣದಲ್ಲಿ ಬೌದ್ಧರೆಂದು ಘೋಷಣೆ ಮಾಡುಕೊಳ್ಳಲು ಇಚ್ಛಿಸುವವರು, ಧರ್ಮದ ಕಾಲಂನಲ್ಲಿ ಬೌದ್ಧ ಆಯ್ಕೆ ಮಾಡಿಕೊಳ್ಳುವ ಜತೆಗೆ, ಜಾತಿ ಕಾಲಂನಲ್ಲಿಯೂ ಬೌದ್ಧ ಎಂದೇ ನಮೂದಿಸಬಹುದು. ಇದರಿಂದಾಗಿ ಸಂವಿಧಾನದತ್ತವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಪಡೆದುಕೊಂಡು, ಶಿಕ್ಷಣ, ಉದ್ಯೋಗ, ರಾಜಕೀಯ ಮೀಸಲಾತಿ ಹಕ್ಕುಗಳನ್ನು ಪಡೆಯಬಹುದಾಗಿದೆ. ಜಾತಿ, ಅಸ್ಪೃಶ್ಯತೆಯ ಕರಾಳತೆಯಿಂದ ಮುಕ್ತರಾಗಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ದೊರೆಯಲಿದೆ’ ಎಂದು ಹೇಳಿದರು.

ADVERTISEMENT

ಸಮಿತಿ ಸಂಚಾಲಕರಾದ ಎಂ. ವೆಂಕಟಸ್ವಾಮಿ, ಎನ್. ಮೂರ್ತಿ, ಬಿ.ಗೋಪಾಲ, ಹ.ರಾ.ಮಹೇಶ್, ಹೆಣ್ಣೂರು ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.