ಬೆಂಗಳೂರು: ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ವಿಶೇಷ ಉತ್ತೇಜನ ನೀಡಲು ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದೆಂದು ಕುಲಪತಿಗಳಾದ ಪ್ರೊ. ರಮೇಶ್.ಬಿ. ತಿಳಿಸಿದ್ದಾರೆ.
ಕಲಬುರಗಿಯ ಪಾಲಿ ಇನ್ ಸ್ಟಿಟ್ಯೂಟ್ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪಾಲಿ-ಕನ್ನಡ ಶಬ್ದಕೋಶ ದ ನಾಲ್ಕನೆಯ ಸಂಪುಟದ ಜನಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಕ್ರಿ.ಪೂ. 5ನೇ ಶತಮಾನದ ಕಾಲಘಟ್ಟದಲ್ಲಿ ಜನಬಳಕೆಯ ಭಾಷೆಯಾಗಿದ್ದ ಪಾಲಿ ಭಾಷೆ ಭಾರತೀಯ ಜ್ಞಾನ ಶಾಖೆಯ ಅತ್ಯಮೂಲ್ಯ ಆಗರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೊಸ ಜನಸಂಸ್ಕೃತಿ ಮತ್ತು ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಗೌತಮ ಬುದ್ಧ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳು ಮಹತ್ವದ ದಾರಿದೀಪಗಳಾಗಿವೆ ಎಂದು ರಮೇಶ್ ಪ್ರತಿಪಾದಿಸಿದರು.
ನ್ಯಾಕ್ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಡಾ. ಎಸ್.ಸಿ. ಶರ್ಮಾ ಗ್ರಂಥ ಜನಾರ್ಪಣೆ ಮಾಡಿದರು. ಪುರಾತನ ಶಾಸ್ತ್ರೀಯ ಭಾಷೆಯಾದ ಪಾಲಿ ಭಾರತೀಯ ಸಂಸ್ಕೃತಿಯ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದು ವಿವರಿಸಿದರು.
ಪಾಲಿ ಇನ್ ಸ್ಟಿಟ್ಯೂಟ್ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್ ಕನ್ನಡವವೂ ಸೇರಿದಂತೆ ದ್ರಾವಿಡ ಭಾಷೆಗಳ ಜೊತೆ ಪಾಲಿ ಭಾಷೆ ಹೊಕ್ಕುಬಳಕೆಯ ಮಹತ್ವ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೈ.ಎಸ್.ಸಿದ್ದೇಗೌಡರು ಮೌಲ್ಯಯುತ ಜೀವನದ ಮೂಲಾಧಾರವಾದ ಸಾಹಿತ್ಯದ ಪೋಷಣೆಗೆ ನಿಘಂಟುಗಳು ಪ್ರಮುಖ ಪಾತ್ರ ವಹಿಸುತ್ತವೆಂದು ಹೇಳಿದರು.
ಪಾಲಿ ಇನ್ ಸ್ಟಿಟ್ಯೂಟ್ ಅಧ್ಯಕ್ಷರಾದ ರಾಹುಲ್ ಎಂ.ಖರ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ-ಪಾಲಿ-ಇಂಗ್ಲೀಷ್ ಭಾಷಾ ವಿದ್ವಾಂಸರಾದ ಸಿ.ಚಂದ್ರಮೋಹನ್ , ಬಿಸಿಯು ಕುಲಸಚಿವ ನವೀನ್ ಜೋಸೆಫ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಕೆ.ಆರ್.ಜಲಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.