ADVERTISEMENT

ಬೆಂಗಳೂರು | ಕುಸಿದ ಕಟ್ಟಡ: ತೆರವು ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 16:29 IST
Last Updated 19 ಫೆಬ್ರುವರಿ 2025, 16:29 IST
ನ್ಯೂ ತಿಪ್ಪಸಂದ್ರದ ಒಂದನೇ ಮುಖ್ಯರಸ್ತೆಯಲ್ಲಿ ಕುಸಿದಿರುವ ಕಟ್ಟಡ
ನ್ಯೂ ತಿಪ್ಪಸಂದ್ರದ ಒಂದನೇ ಮುಖ್ಯರಸ್ತೆಯಲ್ಲಿ ಕುಸಿದಿರುವ ಕಟ್ಟಡ   

ಬೆಂಗಳೂರು: ಜೀವನ್‌ಬಿಮಾ ನಗರ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದ ಒಂದನೇ ಮುಖ್ಯ ರಸ್ತೆಯಲ್ಲಿ ಕಟ್ಟಡವೊಂದು ಬುಧವಾರ ಕುಸಿದಿದ್ದು, ರಾತ್ರಿಯಿಂದಲೇ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಸಿದೆ.

ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು ಐದು ಅಡಿ ಅಗೆಯಲಾಗಿತ್ತು. ಆ ನಿವೇಶನಕ್ಕೆ ಹೊಂದಿಕೊಂಡಂತಿದ್ದ ಕಟ್ಟಡದ ತಳಭಾಗದ ಮಣ್ಣು ಸಡಿಲವಾಗಿ, ನೆಲಮಹಡಿ ಕುಸಿದಿದೆ. ಕಟ್ಟಡ ಪೂರ್ಣವಾಗಿ ವಾಲಿಕೊಂಡಿದೆ.

ಸುಮಾರು 40 ವರ್ಷ ಹಳೆಯ ಕಟ್ಟಡ, ನೆಲ ಅಂತಸ್ತು ಸೇರಿದಂತೆ ನಾಲ್ಕು ಅಂತಸ್ತು ಹೊಂದಿದೆ. ಈ ಕಟ್ಟಡ ವಾಲಿರುವುದರಿಂದ ಅದರಲ್ಲಿದ್ದ ನಿವಾಸಿಗಳು ಹಾಗೂ ಅಕ್ಕ-ಪಕ್ಕದಲ್ಲಿರುವ ನಿವಾಸಿಗಳನ್ನು ಬಿಬಿಎಂಪಿ ಸಿಬ್ಬಂದಿ ಸ್ಥಳಾಂತರಿಸಿದರು.

ADVERTISEMENT

ಪೂರ್ವ ವಲಯದ ಜಂಟಿ ಆಯುಕ್ತರಾದ ಸರೋಜ, ಮುಖ್ಯ ಮುಖ್ಯ ಎಂಜಿನಿಯರ್‌ ಸುಗುಣಾ ನೇತೃತ್ವದಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಗಿದೆ.

‘ವಾಲಿರುವ ಕಟ್ಟಡವನ್ನು ತೆರವುಗೊಳಿಸಲು ಜೆಸಿಬಿ ಹಾಗೂ ಹಿಟಾಚಿಯನ್ನು ಬಳಸಲಾಗುತ್ತಿದೆ. ಕಟ್ಟಡವನ್ನು ನೆಲಸಮ ಮಾಡಿ, ಸ್ಥಳೀಯರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಒಬ್ಬರಿಗೆ ಗಾಯ: ಕಟ್ಟಡ ಕುಸಿಯುವ ಸಂದರ್ಭದಲ್ಲಿ ನೆಲ ಅಂತಸ್ತಿನಲ್ಲಿ ಆರು ಮಂದಿ ಇದ್ದರು. ಕಟ್ಟಡ ವಾಲುತ್ತಿರುವುದನ್ನು ಗಮನಿಸಿದ್ದ ಅವರು, ಹೊರಕ್ಕೆ ಬಂದು ಪಾರಾಗಿದ್ದಾರೆ. ಅದರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು.

ಬುಧವಾರ ಸಂಜೆ 4.15ರ ಸುಮಾರಿಗೆ ಕಟ್ಟಡ ಕುಸಿದ ಮಾಹಿತಿ ಲಭಿಸಿತು. ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ನೆಲ ಅಂತಸ್ತಿನಲ್ಲಿದ್ದ ಎಲ್ಲರೂ ಹೊರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೂ, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ಮುಂದುರೆಸಲಾಗಿದೆ ಎಂದು ಅಗ್ನಿಶಾಮಕದ ಅಧಿಕಾರಿಗಳು ತಿಳಿಸಿದರು.

ಕಟ್ಟಡ ಮಾಲೀಕ ಚೆನ್ನೈನಲ್ಲಿ ನೆಲಸಿದ್ದಾರೆ. ಕಟ್ಟಡದಲ್ಲಿ ಐದು ಕುಟುಂಬಗಳು ನೆಲಸಿದ್ದವು. ನೆಲ ಅಂತಸ್ತಿನಲ್ಲಿ ಮಳಿಗೆ ಇತ್ತು. ಮೂರು ದ್ವಿಚಕ್ರ ವಾಹನಗಳು ಕಟ್ಟಡದ ಅವಶೇಷಗಳಡಿ ಸಿಲುಕಿವೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.