ADVERTISEMENT

ಕಟ್ಟಡ ಕಾರ್ಮಿಕರ ಕುಟುಂಬಕ್ಕೂ ಸಿಗಲಿದೆ ಉಚಿತ ಬಸ್‌ ಪಾಸ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:41 IST
Last Updated 26 ಫೆಬ್ರುವರಿ 2020, 19:41 IST
ಸಿ. ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಸಿ. ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ   

ಬೆಂಗಳೂರು: ‌ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತವಾಗಿ ಬಸ್ ಪಾಸ್ ನೀಡುವ ಪ್ರಸ್ತಾವನೆಯನ್ನು ಬಿಎಂಟಿಸಿ ಸಿದ್ಧಪಡಿಸಿದೆ.

ಕಾರ್ಮಿಕ ಇಲಾಖೆ ಮತ್ತು ಬಿಎಂಟಿಸಿ ಸಹಯೋಗದಲ್ಲಿ ಸದ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಾರ್ಷಿಕ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸಂಗ್ರಹವಾಗಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಇದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 21.78 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. ಬಿಎಂಟಿಸಿ ಪಾಸ್ ಸೌಲಭ್ಯವನ್ನು 5,800 ಜನರು ಮಾತ್ರ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು ಒಂದು ಸಾವಿರದಷ್ಟು ಕಾರ್ಮಿಕರು ಹೊಸದಾಗಿ ಪಾಸ್ ಸೌಲಭ್ಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ADVERTISEMENT

ಈ ಪಾಸ್ ಪಡೆದವರು ನಗರದ ಯಾವುದೇ ಭಾಗಕ್ಕೆ ಬಿಎಂಟಿಸಿಯಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಈ ಸೌಲಭ್ಯವನ್ನು ಕಾರ್ಮಿಕರ ಕುಟುಂಬ ಸದಸ್ಯರಿಗೂ ವಿಸ್ತರಿಸುವ ಸಂಬಂಧ ಬಿಎಂಟಿಸಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.

‘ಇದಕ್ಕೆ ಕಾರ್ಮಿಕ ಇಲಾಖೆ ಕೂಡ ಸಹಮತ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾ.5ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ’ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

**

ಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಮತ್ತು ಗಾರ್ಮೆಂಟ್ಸ್ ಮಹಿಳಾ ನೌಕರರಿಗೆ ಪಾಸ್ ನೀಡುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ

-ಸಿ. ಶಿಖಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ

ಗಾರ್ಮೆಂಟ್ಸ್ ನೌಕರರಿಗೂ ಪಾಸ್

ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಿಎಂಟಿಸಿ ತಿಂಗಳ ಬಸ್ ಪಾಸ್ ನೀಡುವ ಪ್ರಸ್ತಾವನೆ ಕೂಡ ಸರ್ಕಾರದ ಮುಂದಿದೆ.

‘ಕಾರ್ಮಿಕ ಇಲಾಖೆ, ಬಿಎಂಟಿಸಿ, ಗಾರ್ಮೆಂಟ್ಸ್ ಇಂಡಸ್ಟ್ರಿ ಮತ್ತು ನೌಕರರ ಪಾಲುದಾರಿಕೆಯಲ್ಲಿ ಪಾಸ್ ನೀಡುವ ಆಲೋಚನೆ ಇದೆ. ನೌಕರರು ₹100 ಪಾವತಿಸಿದರೆ, ಗಾರ್ಮೆಂಟ್ಸ್ ಕಂಪನಿಯವರು ₹600 ನೀಡಬೇಕು. ಒಟ್ಟಾರೆ ₹1,050 ಮೊತ್ತದ ಪಾಸ್ ನೀಡಲಾಗುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.