ADVERTISEMENT

‘ರಾಕ್‌ಸ್ಟಾರ್‌’ ಜೀವನಗಾಥೆ ಹೇಳುವ ಕೃತಿ: ರಾಜದೀಪ್‌ ಸರ್ದೇಸಾಯಿ

ಪ್ರಣಯ್‌ ಪಾಟೀಲ ಅವರ ‘ಬರ್ಗಂಡಿ ವಿಂಟರ್–ಇನ್ ಯುರೋಪ್‌’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಮೇ 2022, 16:20 IST
Last Updated 7 ಮೇ 2022, 16:20 IST
ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಅವರು ಪುಸ್ತಕ ಬಿಡುಗಡೆ ಮಾಡಿದರು. ಲೇಖಕ ಪ್ರಣಯ್‌ ಪಾಟೀಲ ಹಾಗೂ ಅಂಕಣಗಾರ್ತಿ ಪೂಜಾ ಬೇಡಿ ಇದ್ದರು -ಪ್ರಜಾವಾಣಿ ಚಿತ್ರ
ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಅವರು ಪುಸ್ತಕ ಬಿಡುಗಡೆ ಮಾಡಿದರು. ಲೇಖಕ ಪ್ರಣಯ್‌ ಪಾಟೀಲ ಹಾಗೂ ಅಂಕಣಗಾರ್ತಿ ಪೂಜಾ ಬೇಡಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಣಯ್‌ ಪಾಟೀಲ ಅವರ ‘ಬರ್ಗಂಡಿ ವಿಂಟರ್–ಇನ್ ಯುರೋಪ್‌’ ಕೃತಿಯು ರಾಕ್‌ಸ್ಟಾರ್‌ ಒಬ್ಬರ ಜೀವನಗಾಥೆ ಹೇಳುವ ಪುಸ್ತಕ. ನೈಜ ಹಾಗೂ ನೇರ ನಿರೂಪಣೆಯಿಂದಾಗಿ ಓದುಗರನ್ನು ಆವರಿಸಿಕೊಳ್ಳುವ ಈ ಕೃತಿ, ಅವರ ಭಾವ ತಂತಿಯನ್ನು ಮೀಟಿ ಕಣ್ಣುಗಳೂ ಹನಿಗೂಡುವಂತೆ ಮಾಡುತ್ತದೆ’ ಎಂದು ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾದಂಬರಿಯ ನಾಯಕಜೇಸ್‌ ಟನ್ನರ್‌ನ ತೊಳಲಾಟ, ಮಾದಕ ವಸ್ತು ಸೇವನೆ ಆತನ ಜೀವ ಹಿಂಡುವ ಪರಿ, ನಾಯಕಿ ಯಾಸ್ಮಿನ್‌ಳ ಪ್ರವೇಶದಿಂದ ಆತನ ಬದುಕಿನಲ್ಲಾಗುವ ಬದಲಾವಣೆಯನ್ನು ಓದುಗರ ಮನಮುಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ. ಪ್ರೀತಿ–ಪ್ರಣಯ, ಭೂತದ ಕತೆಗಳು, ವಾಮಾಚಾರ, ಪುನರ್ಜನ್ಮ ಕೂಡ ಕಾದಂಬರಿಯಲ್ಲಿ ಇಣುಕುತ್ತವೆ’ ಎಂದರು.

ADVERTISEMENT

‘ಜರ್ಮನಿಯ ಜನರ ಬದುಕು, ಅಲ್ಲಿನ ಸಂಸ್ಕೃತಿಯನ್ನು ಬಹಳ ಹತ್ತಿರದಿಂದ ಕಂಡಿರುವ ಲೇಖಕರು, ತಮ್ಮ ಅನುಭವಕ್ಕೆ ಬಂದ ಅನೇಕ ಸಂಗತಿಗಳನ್ನು ಈ ಕಾದಂಬರಿಯ ಮೂಲಕ ಓದುಗರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಮಾನವ ಸಂಬಂಧಗಳ ಮೇಲೂ ಬೆಳಕು ಚೆಲ್ಲಿದ್ದಾರೆ. ಕೃತಿಯನ್ನು ಓದಿದಾಗ ಅದು ಮನದಟ್ಟಾಗುತ್ತದೆ. ಸಹೋದರಿ ಪರ್ಲ್‌ಳ ಮನವೊಲಿಕೆ ನಂತರ ನಾಯಕ ಪ್ಯಾರಿಸ್‌ ಪ್ರಯಾಣ ಕೈಗೊಳ್ಳುವುದು. ಅಲ್ಲಿ ನಾಯಕಿ ಪರಿಚಯವಾಗುವುದು, ಆಕೆ ಜೀವನದ ಬಗೆಗೆ ನಾಯಕ ಹೊಂದಿರುವ ದೃಷ್ಟಿಕೋನ ಬದಲಿಸುವುದೂ ಇದರಲ್ಲಿ ಚಿತ್ರಿತವಾಗಿದೆ’ ಎಂದು ತಿಳಿಸಿದರು.

ಅಂಕಣಗಾರ್ತಿ ಪೂಜಾ ಬೇಡಿ, ‘ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. ಮನುಷ್ಯನ ಜೀವ ಬಹಳ ಅಮೂಲ್ಯವಾದುದು. ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಜೀವನದಲ್ಲಿ ಏಳು–ಬೀಳು ಸಾಮಾನ್ಯ. ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನೂ ಇದು ಒತ್ತಿ ಹೇಳುತ್ತದೆ’ ಎಂದು ಹೇಳಿದರು.

ಪುಸ್ತಕದ ‍ಪರಿಚಯ

ಕೃತಿಯ ಹೆಸರು:ಬರ್ಗಂಡಿ ವಿಂಟರ್–ಇನ್ ಯುರೋಪ್‌

ಲೇಖಕರು:ಪ್ರಣಯ್‌ ಪಾಟೀಲ

ದರ: ₹975

ಪುಟಗಳು:326

ಪ್ರಕಾಶಕರು: ಕ್ರಿಸ್ಟಲ್ ಪೀಕ್ ಪಬ್ಲಿಷರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.