ADVERTISEMENT

ಹಳ್ಳಕ್ಕೆ ಬಿದ್ದ ಶಾಲಾ ಬಸ್: ಚಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 20:16 IST
Last Updated 2 ಜೂನ್ 2022, 20:16 IST
ನಗರದ ಕೊಡ್ಲು ಹಾಗೂ ಪರಪ್ಪನ ಅಗ್ರಹಾರ ನಡುವಿನ ರಸ್ತೆಯಲ್ಲಿ ಕ್ವಾರಿ ಹಳ್ಳಕ್ಕೆ ಉರುಳಿಬಿದ್ದಿದ್ದ ಶಾಲಾ ಮಿನಿ ಬಸ್ – ಪ್ರಜಾವಾಣಿ ಚಿತ್ರ
ನಗರದ ಕೊಡ್ಲು ಹಾಗೂ ಪರಪ್ಪನ ಅಗ್ರಹಾರ ನಡುವಿನ ರಸ್ತೆಯಲ್ಲಿ ಕ್ವಾರಿ ಹಳ್ಳಕ್ಕೆ ಉರುಳಿಬಿದ್ದಿದ್ದ ಶಾಲಾ ಮಿನಿ ಬಸ್ – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಹೊರಟಿದ್ದ ಮಿನಿ ಬಸ್ಸೊಂದು ಕ್ವಾರಿ ಹಳ್ಳಕ್ಕೆ ಉರುಳಿಬಿದ್ದಿದ್ದು, ಚಾಲಕ ಸುಬ್ರಮಣಿ (32) ತೀವ್ರವಾಗಿ ಗಾಯಗೊಂಡಿದ್ದಾರೆ.

'ಎಚ್‌ಎಸ್‌ಆರ್‌ ಲೇಔಟ್‌ ಬಳಿಯ ಫ್ರೀಡಂ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸೇರಿದ್ದ ಬಸ್‌, ಕೊಡ್ಲು ಹಾಗೂ ಪರಪ್ಪನ ಅಗ್ರಹಾರ ನಡುವಿನ ರಸ್ತೆಯಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಮಕ್ಕಳು ಇರಲಿಲ್ಲ. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಹೇಳಿದರು.

‘ರಸ್ತೆ ಪಕ್ಕದಲ್ಲಿ ಕ್ವಾರಿ ಹಳ್ಳಗಳು ಹೆಚ್ಚಿದ್ದು, ಅಲ್ಲೆಲ್ಲ ನೀರು ತುಂಬಿಕೊಂಡಿದೆ. ಹಳ್ಳ ಹಾಗೂ ರಸ್ತೆ ಮಧ್ಯೆ ಯಾವುದೇ ತಡೆಗೋಡೆಗಳು ಇಲ್ಲ. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ನಿಲ್ಲಿಸಿ, ತಾತ್ಕಾಲಿಕ ತಂತಿ ಬೇಲಿ ಸುತ್ತಲಾಗಿತ್ತು. ಇದೇ ರಸ್ತೆಯಲ್ಲಿ ಬೆಳಿಗ್ಗೆ 7.30ರ ಸುಮಾರಿಗೆ ಬಸ್‌ ಹೊರಟಿತ್ತು.’

ADVERTISEMENT

‘ಸವಾರನೊಬ್ಬ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸುತ್ತ ಬಸ್ಸಿನ ಎದುರು ಬಂದಿದ್ದ. ಡಿಕ್ಕಿ ತಪ್ಪಿಸಲು ಹೋದ ಚಾಲಕ ಸುಬ್ರಮಣಿ, ಸ್ಟೇರಿಂಗ್ ತಿರುಗಿಸಿದ್ದರು. ನಿಯಂತ್ರಣ ಕಳೆದುಕೊಂಡ ಬಸ್, 40 ಅಡಿ ಆಳದ ಕ್ವಾರಿ ಹಳ್ಳಕ್ಕೆ ಬಿದ್ದು ಭಾಗಶಃ ನೀರಿನಲ್ಲಿ ಮುಳುಗಿತ್ತು. ಚಾಲಕನ ಕೂಗು ಕೇಳಿಸಿಕೊಂಡಿದ್ದ ಪಾದಚಾರಿಯೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಸೇರಿ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ತಿಳಿಸಿದರು.

ಬಿಬಿಎಂಪಿ ನಿರ್ಲಕ್ಷ್ಯ: ‘ಕ್ವಾರಿ ಹಳ್ಳಗಳಿರುವ ರಸ್ತೆಗಳು ಅಪಾಯಕಾರಿಯಾಗಿವೆ. ಹಲವು ಬಾರಿ ದೂರು ನೀಡಿದರೂ ಹಳ್ಳ ಮುಚ್ಚಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.