ADVERTISEMENT

ನಿಲ್ದಾಣದಲ್ಲಿದ್ದ ಬಿಎಂಟಿಸಿ ಬಸ್‌ಗೆ ಬೆಂಕಿ: ಒಳಗೆ ಮಲಗಿದ್ದ ನಿರ್ವಾಹಕ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 4:21 IST
Last Updated 11 ಮಾರ್ಚ್ 2023, 4:21 IST
   

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ‘ಡಿ’ ಗ್ರೂಪ್ ನೌಕರರ ಬಡಾವಣೆ ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದ ಬಿಎಂಟಿಸಿ ಬಸ್ ಶುಕ್ರವಾರ ನಸುಕಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಬಸ್ಸಿನೊಳಗೆ ಮಲಗಿದ್ದ ನಿರ್ವಾ ಹಕ ಮುತ್ತಯ್ಯ ಸ್ವಾಮಿ (43) ಸಜೀವ ದಹನವಾಗಿದ್ದಾರೆ.

ಬಾಗಲಕೋಟೆಯ ಮುತ್ತಯ್ಯ ಸ್ವಾಮಿ, ಬಿಎಂಟಿಸಿಯಲ್ಲಿ 15 ವರ್ಷಗಳಿಂದ ಚಾಲಕ ಹಾಗೂ ನಿರ್ವಾಹಕ ರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಪತ್ನಿ ಹಾಗೂ 14 ವರ್ಷದ ಮಗಳಿದ್ದು, ಅವರಿಬ್ಬರೂ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ. ಮುತ್ತಯ್ಯ ಅವರು ನಗರದ ಕೊಠಡಿಯೊಂದರಲ್ಲಿ ಸ್ನೇಹಿತರ ಜೊತೆ ವಾಸವಿದ್ದರು.

‘ಸುಮನಹಳ್ಳಿ‌ ಡಿಪೊ-31ಕ್ಕೆ ಸೇರಿದ್ದ ಮೆಜೆಸ್ಟಿಕ್– ಬ್ಯಾಡರಹಳ್ಳಿ ಮಾರ್ಗದ ಬಸ್‌ನಲ್ಲಿ (ಕೆಎ 57 ಎಫ್ 2069) ಮುತ್ತಯ್ಯ ಹಾಗೂ‌ ಚಾಲಕ ಪ್ರಕಾಶ್ (39) ಕರ್ತವ್ಯದಲ್ಲಿದ್ದರು. ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ‌ ಮುಗಿಸಿ ಎಂದಿನಂತೆ ‘ಡಿ’ ಗ್ರೂಪ್ ನೌಕರರ ಬಡಾವಣೆ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘₹ 5 ಲಕ್ಷ ಪರಿಹಾರ: ಪತ್ನಿಗೆ ನೌಕರಿ’

‘ನಿರ್ವಾಹಕ ಮುತ್ತಯ್ಯ ಸ್ವಾಮಿ ಸಾವಿನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ವಿತರಿಸಲಾಗುತ್ತಿದೆ. ಮೃತರ ಪತ್ನಿಯ ವಯೋಮಿತಿ ಮೀರಿದರೂ ಸಡಿಲಿಕೆ ಮಾಡಿ ಅನುಕಂಪದ ನೌಕರಿ ನೀಡಲಾಗುತ್ತಿದೆ’ ಎಂದು ಬಿಎಂಟಿಸಿ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಬಿಎಂಟಿಸಿ ಸಾರ್ವ ಜನಿಕ ಸಂಪರ್ಕ ಅಧಿಕಾರಿ, ‘ಇಲಾಖೆಯ ಗುಂಪು ವಿಮೆಯಿಂದ ₹ 3 ಲಕ್ಷ ಪರಿಹಾರವೂ ಸಿಗಲಿದೆ. ಹಿರಿಯ ಅಧಿಕಾರಿಯೊಬ್ಬರು ಬಾಗಲಕೋಟೆಗೆ ಹೋಗಿ, ಪರಿಹಾರ ಮೊತ್ತದ ಚೆಕ್ ನೀಡಲಿದ್ದಾರೆ. ನಿಲ್ದಾಣ ಮತ್ತು ತಂಗುದಾಣಗಳಲ್ಲಿ ಸಿಬ್ಬಂದಿ ತಂಗುವ ಸ್ಥಳಗಳ ಪರಿಶೀಲನೆ ನಡೆಸಲಾಗುವುದು. ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಬೆಂಕಿಗೆ ಆಹುತಿಯಾಗಿರುವ ಬಸ್‌, 2017ರಲ್ಲಿ ಸಂಸ್ಥೆಗೆ ಸೇರ್ಪಡೆ ಗೊಂಡಿತ್ತು. ಇದುವರೆಗೂ 3.75 ಲಕ್ಷ ಕಿ.ಮೀ. ಸಂಚರಿಸಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಅವಘಡದ ಕುರಿತು ಆಂತರಿಕ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.