ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು
ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ರಕ್ಷಣಾ ಸಮಿತಿ (ಕೆಆರ್‌ಎಸ್) ಪಕ್ಷದಿಂದ ನಗರದ ಮೆಜೆಸ್ಟಿಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ರಘು ಜಾಣಗೆರೆ, ‘ರಾಜ್ಯ ಸರ್ಕಾರವು ದರ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದೆ’ ಎಂದು ಆಪಾದಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಅವರು, ‘ಜನರು ಬೀದಿಗಿಳಿದು ಸರ್ಕಾರವನ್ನು
ಪ್ರಶ್ನಿಸದಿದ್ದರೆ ಜನರ ಸುಲಿಗೆ ನಿರಂತರವಾಗಿ ನಡೆಯಲಿದೆ’ ಎಂದೂ ಎಚ್ಚರಿಸಿದರು.
ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು ಚಾಮರಾಜಪೇಟೆ ಪೊಲೀಸ್ ಮೈದಾನಕ್ಕೆ ಕರೆದೊಯ್ದರು. ನಂತರ ಬಿಡುಗಡೆ ಮಾಡಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಘು ನಂದನ್, ರಾಜ್ಯ ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲಾ ಹಾಗೂ ನಿರ್ಮಲಾ, ನಾಗೇಂದ್ರ, ಅಮಿತ್, ರಾಮರೆಡ್ಡಿ, ಶ್ರೀನಿವಾಸ್
ಭಾಗವಹಿಸಿದ್ದರು.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯಿತು.
ಎಸ್‌ಯುಸಿಐ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಕಾರ್ಯದರ್ಶಿ ಜ್ಞಾನಮೂರ್ತಿ ಮಾತನಾಡಿ, ‘ಬಡ ಜನರು ಬಳಸುವ ಬಸ್ ಸೌಲಭ್ಯದ ದರ ಹೆಚ್ಚಿಸಿರುವುದು ಬಡವರ ಮೇಲೆ ಬರೆ ಎಳೆದಂತೆ ಆಗಿದೆ. ಹೊಸ ವರ್ಷದ ಉಡುಗೊರೆಯಾಗಿ ಸರ್ಕಾರ ದರ ಏರಿಕೆಯ ಪೆಟ್ಟು ನೀಡಿದೆ. ಸಾರಿಗೆಯಂತಹ ಮೂಲಸೌಲಭ್ಯ ದುಬಾರಿಗೊಳಿಸುವುದು ಸರಿಯಾದ ನಿರ್ಧಾರ ಅಲ್ಲ’ ಎಂದು ಹೇಳಿದರು.
‘ಹಿಂದಿನ ಎಲ್ಲಾ ಸರ್ಕಾರಗಳೂ ಸೇರಿದಂತೆ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ತಿಳಿಸಿದರು. ವಿನಯ್ ಸಾರಥಿ, ಎಂ.ಎನ್. ಶ್ರೀರಾಮ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.