ADVERTISEMENT

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ಆಗ್ರಹ

₹1,000 ಕೋಟಿ ಮೀಸಲಿಡಲು ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 19:54 IST
Last Updated 25 ಫೆಬ್ರುವರಿ 2022, 19:54 IST

ಬೆಂಗಳೂರು: ಮಹಿಳೆಯರು, ತೃತೀಯ ಲಿಂಗಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಆಗ್ರಹಿಸಿದೆ.

ಸುರಕ್ಷಿತ ಮತ್ತು ಗೌರವಯುತವಾದ ಪ್ರಯಾಣಕ್ಕಾಗಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದು ಅಗತ್ಯವಿದೆ ಎಂದು ವೇದಿಕೆ ಪ್ರತಿಪಾದಿಸಿದೆ.

ದುಬಾರಿ ಪ್ರಯಾಣ ದರದ ಬಗ್ಗೆ ವೇದಿಕೆ ಇತ್ತೀಚೆಗೆ ಸಾರ್ವಜನಿಕರ ಅಹವಾಲುಗಳ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ವೇದಿಕೆಯ ವಿನಯ್ ಶ್ರೀನಿವಾಸ್‌, ‘ಸರ್ಕಾರ ಬಸ್ ಸೇವೆಯನ್ನು ಕೇವಲ ಲಾಭ ಮತ್ತು ನಷ್ಟದ ದೃಷ್ಟಿಕೋನದಿಂದ ನೋಡಬಾರದು. ಇದನ್ನು ಸೇವೆಯನ್ನಾಗಿ ಪರಿಗಣಿಸಬೇಕು. ಈ ಉಚಿತ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಬಿಎಂಟಿಸಿಗೆ ₹1 ಸಾವಿರ ಕೋಟಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಐಐಎಸ್‌ಸಿಯ ಪ್ರೊ. ಆಶಿಶ್ ವರ್ಮಾ ಮಾತನಾಡಿ, ‘ಪ್ರಯಾಣ ದರಗಳು ಜನಸಾಮಾನ್ಯರಿಗೆ ಕೈಗೆಟುಕುವಂತಿರಬೇಕು. ಇದಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಿ ಬಿಎಂಟಿಸಿಗೆ ಆರ್ಥಿಕ ನೆರವು ಕಲ್ಪಿಸುವುದು ಅಗತ್ಯವಿದೆ. ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಒಂದು ಪಥವನ್ನು ಬಸ್‌ಗಳಿಗೆ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಸಿಂಥಿಯಾ ಸ್ಟೀಫನ್ ಮಾತನಾಡಿ, ‘ಕಾರ್ಮಿಕ ವರ್ಗಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ಹೆಗಡೆ ನಗರ, ಟ್ಯಾನರಿ ರಸ್ತೆ ಮುಂತಾದ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರ ಕಡಿಮೆ. ಇದರಿಂದ ಬಸ್‌ಗಳು ಯಾವಾಗಲೂ ಕಿಕ್ಕಿರಿದು ಭರ್ತಿಯಾಗಿರುತ್ತವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ಸಂಚಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಗಾರ್ಮೆಂಟ್ಸ್‌ ಕಾರ್ಖಾನೆಗಳು ತಮ್ಮದೇ ಆದ ಸಾರಿಗೆ ಸೌಲಭ್ಯ ಒದಗಿಸಿದರೂ ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ. ಹೀಗಾಗಿ, ಬಿಎಂಟಿಸಿ ಸುರಕ್ಷಿತ ಪ್ರಯಾಣಕ್ಕಾಗಿ ಕೈಗೆಟಕುವ ದರಗಳಲ್ಲಿ ಸೇವೆ ನೀಡಬೇಕು. ತಮಿಳುನಾಡು ಮತ್ತು ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ. ಇದೇ ಮಾದರಿಯನ್ನು ಕರ್ನಾಟಕ ಅನುಸರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ, ಆನೇಕಲ್‌ ನಿವಾಸಿ ವಿಜಯಕುಮಾರಿ ಒತ್ತಾಯಿಸಿದರು.

ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಾಬು ಮಾತನಾಡಿ, ‘ಹೆಚ್ಚಿನ ಪ್ರಮಾಣದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ. ದರ ಕಡಿಮೆ ಮಾಡುವುದರಿಂದ ಮತ್ತು ಮಹಿಳೆಯರಿಗೆ ಉಚಿತ
ಸಾರಿಗೆ ಸೌಲಭ್ಯ ಕಲ್ಪಿಸುವುದರಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.