ADVERTISEMENT

ಬಸ್‌ ಸೌಲಭ್ಯ ಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:32 IST
Last Updated 23 ಅಕ್ಟೋಬರ್ 2020, 2:32 IST
ನಂಗಲಿಯಲ್ಲಿ ಬಸ್‌ಗೆ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು
ನಂಗಲಿಯಲ್ಲಿ ಬಸ್‌ಗೆ ಹತ್ತಲು ಮುಗಿಬಿದ್ದಿರುವ ಪ್ರಯಾಣಿಕರು   

ನಂಗಲಿ: ಸರ್ಕಾರ ಹಂತ ಹಂತವಾಗಿ ಲಾಕ್‌ಡೌನ್ ಹಿಂತೆಗೆದುಕೊಂಡು ಬಸ್‌ ಸಂಚಾರಕ್ಕೆ ಅವಕಾಶ ನೀಡಿದ್ದರೂ ಸಮಯಕ್ಕೆ ಸರಿಯಾಗಿ ಬಸ್‌ಗ‌ಳು ಸಂಚರಿಸುತ್ತಿಲ್ಲ. ಹಾಗಾಗಿ, ಪ್ರಯಾಣಿಕರು ಪ್ರತಿದಿನವೂ ಪರದಾಡುತ್ತಿದ್ದಾರೆ. ಬಸ್‌ಗಳನ್ನೇ ನಂಬಿಕೊಂಡಿರುವ ಪ್ರಯಾಣಿಕರು ಆಗಲೋ ಈಗಲೋ ಬರುವ ಬಸ್‌ಗಳಿಗಾಗಿ ದಿನವಿಡೀ ಕಾಯುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಲಾಕ್‌ಡೌನ್‌ಗಿಂತಲೂ ಮೊದಲು 100ಕ್ಕಿಂತಲೂ ಹೆಚ್ಚು ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಒಂದು ತಿಂಗಳ ಹಿಂದೆ ಬಸ್‌ ಸಂಚಾರಕ್ಕೆ ಅವಕಾಶ ನೀಡಿದ್ದರೂ ಸಮಯಕ್ಕೆ ಸರಿಯಾಗಿ ಪ್ರಯಾಣಿಕರಿಗೆ ಬಸ್‌ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಬಸ್‌ನಿಲ್ದಾಣ ಮತ್ತು ರಸ್ತೆಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಕೆಲವು ನಗರ ಮತ್ತು ಪಟ್ಟಣಗಳಿಗೆ ಸಂಚರಿಸುತ್ತಿದ್ದರೂ ಮೊದಲಿನಷ್ಟು ಸಂಖ್ಯೆಯಲ್ಲಿ ರಸ್ತೆಗೆ ಇಳಿದಿಲ್ಲ. ಕೆಲವು ತಾಲ್ಲೂಕು, ಜಿಲ್ಲಾ ಹಾಗೂ ಅಂತರರಾಜ್ಯ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಬಹುತೇಕ ಗ್ರಾಮಾಂತರ ಪ್ರದೇಶಗಳಿಗೆ ಬಸ್‌ಗಳೇ ಇಲ್ಲ. ಜನರು ಕಾಲ್ನಡಿಗೆಯಲ್ಲಿ ಪಟ್ಟಣಗಳಿಗೆ ಬಂದು ಹೋಗುವಂತಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಕೆರಸಿಮಂಗಲ, ಪೆದ್ದೂರು, ತಿಪ್ಪದೊಡ್ಡಿ, ನಗವಾರ, ಹೆಬ್ಬಣಿ, ಕಸುವುಗಾನಹಳ್ಳಿ, ಮಾರಂಡಹಳ್ಳಿ, ಗುಮ್ಮಕಲ್ಲು, ಉಪ್ಪರಹಳ್ಳಿ, ಟಿ. ಕುರುಬರಹಳ್ಳಿ, ತಿಪ್ಪದೊಡ್ಡಿ, ಉಗಿಣಿ ಸೇರಿದಂತೆ ಹಲವು ಊರುಗಳಿಗೆ ಸಂಚರಿಸುತ್ತಿದ್ದ ಬಸ್‌ಗಳು ಇದುವರೆಗೂ ರಸ್ತೆಗಿಳಿದಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.