ADVERTISEMENT

ಚೌತಿಗೆ ಬಸ್ ಪ್ರಯಾಣ ದರ ದುಬಾರಿಯ ಬರೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:28 IST
Last Updated 27 ಆಗಸ್ಟ್ 2019, 20:28 IST
   

ಬೆಂಗಳೂರು: ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬಂದು ನೆಲೆಸಿರುವವರು ಗಣೇಶ ಹಬ್ಬಕ್ಕೆ ಊರಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಖಾಸಗಿ ಬಸ್‌ ಕಂಪನಿಯವರು ಈ ಬಾರಿಯೂ ಪ್ರಯಾಣ ದರವನ್ನೂ ಏರಿಕೆ ಮಾಡಿದ್ದಾರೆ.

ಸೆಪ್ಟೆಂಬರ್ 2ರಂದು ಗಣೇಶ ಹಬ್ಬ ಇದೆ. ಅದರ ಮುನ್ನಾದಿನಗಳಾದ ಆ. 31 ಹಾಗೂ ಸೆ. 1ರಂದು ನಗರದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಸಾರಿಗೆ ನಿಗಮ ಮತ್ತು ಖಾಸಗಿ ಸಂಸ್ಥೆಗಳು ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಿವೆ.

ಬೇಡಿಕೆ ಹೆಚ್ಚಿರುವುದರಿಂದ ಖಾಸಗಿ ಸಂಸ್ಥೆಗಳು, ಪ್ರತಿವರ್ಷದಂತೆ ಈ ವರ್ಷವೂ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ. ದರ ಹೆಚ್ಚಾದರೂ ಪರವಾಗಿಲ್ಲ. ಊರಿಗೆ ಹೋದರೆ ಸಾಕು ಎನ್ನುತ್ತಿರುವ ಜನ, ಆನ್‌ಲೈನ್‌ ಮೂಲಕ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸುತ್ತಿದ್ದಾರೆ.

ADVERTISEMENT

ನಗರದಿಂದ ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮುಂಬೈಗೆ ಹೋಗುವ ಖಾಸಗಿ ಬಸ್‌ಗಳಿಗೆ ಬೇಡಿಕೆ ಇದೆ. ಖಾಸಗಿ ಕಂಪನಿಗಳ ಹವಾನಿಯಂತ್ರಿತ ಸ್ಲೀಪರ್‌, ನಾನ್‌ ಎ.ಸಿ ಸ್ಲೀಪರ್‌, ಎ.ಸಿ ಸೀಟರ್‌ ಹಾಗೂ ನಾನ್‌ ಎ.ಸಿ ಸೀಟರ್‌ ಬಸ್‌ಗಳ ಪ್ರಯಾಣ ದರ ದುಪ್ಪಟ್ಟು ಮಾಡಲಾಗಿದೆ.

‘ಪ್ರತಿ ವರ್ಷವೂ ಖಾಸಗಿ ಬಸ್‌ಗಳದ್ದು ಇದೇ ಆಯಿತು. ಸಾರಿಗೆ ಇಲಾಖೆಯೂ ಮೌನವಾಗಿದ್ದು, ನಮ್ಮ ಸಮಸ್ಯೆ ಯಾರಿಗೆ ಹೇಳುವುದು’ ಎಂದು ಪ್ರಯಾಣಿಕ ಭರತ್‌ ಕುಮಾರ್ ಪ್ರಶ್ನಿಸಿದರು.

ಬಸ್ ಕಂಪನಿ ಮಾಲೀಕರೊಬ್ಬರು, ‘ನಿತ್ಯವೂ ಬಸ್‌ಗಳ ಸಂಚಾರ ಇದ್ದೇ ಇರುತ್ತದೆ. ಒಮ್ಮೊಮ್ಮೆ ಪ್ರಯಾಣಿಕರ ಕೊರತೆಯಿಂದ ನಷ್ಟವೂ ಉಂಟಾಗುತ್ತದೆ. ಹೀಗಾಗಿ, ಬೇಡಿಕೆ ಇರುವ ಸಮಯದಲ್ಲಿ ದರ ಏರಿಕೆ ಮಾಡುವುದು ಅನಿವಾರ್ಯ’ ಎಂದು ಹೇಳಿದರು.

ರೈಲಿನಲ್ಲೂ ಸೀಟುಗಳು ಭರ್ತಿ : ರೈಲು ಮೂಲಕ ಊರಿಗೆ ಹೋಗುವವರು ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.