ADVERTISEMENT

ಶನಿವಾರ ರಾತ್ರಿಯೇ ಬಸ್‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 20:53 IST
Last Updated 21 ಮಾರ್ಚ್ 2020, 20:53 IST

ಬೆಂಗಳೂರು: ಬಿಟಿಎಂ ಲೇಔಟ್ ಹಾಗೂ ಬನಶಂಕರಿಯಿಂದ ಮೆಜೆಸ್ಟಿಕ್‌ಗೆ ಹೋಗುವ ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಶನಿವಾರ ರಾತ್ರಿಯೇ ಸ್ಥಗಿತಗೊಳಿಸಲಾಗಿತ್ತು.

ನಿತ್ಯದ ಕೆಲಸ ಮುಗಿಸಿ ಮನೆಗೆ ಹೋಗುವ ಹಾಗೂ ಅಗತ್ಯ ವಸ್ತುಗಳನ್ನು ತರಲು ಮಾರುಕಟ್ಟೆಗೆ ಹೋಗುವ ಜನ ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ರಾತ್ರಿ 8ಕ್ಕೆ ಬಸ್‌ಗಳ ಕೊನೆಯ ಟ್ರಿಪ್ ಮುಕ್ತಾಯವಾಯಿತೆಂದು ಬಿಎಂಟಿಸಿ ಸಿಬ್ಬಂದಿ ಹೇಳಿದರು.

‘ಭಾನುವಾರ ಬೆಳಿಗ್ಗೆಯಿಂದ ಜನತಾ ಕರ್ಫ್ಯೂ ಇದೆ. ಮುನ್ನಾದಿನವಾದ ಶನಿವಾರ ರಾತ್ರಿಯೇ ಬಸ್‌ಗಳ
ಸಂಚಾರ ಬಂದ್ ಮಾಡಿದ್ದರಿಂದ ಪ್ರಯಾಣಿಕರು ಪರದಾಡಬೇಕಾಯಿತು’ ಎಂದು ಪ್ರಯಾಣಿಕ ಕೃಷ್ಣಮೂರ್ತಿ ದೂರಿದರು.

ADVERTISEMENT

ಭಾನುವಾರ ಜನತಾ ಕರ್ಫ್ಯೂ ನಡೆಯಲಿದ್ದು, ನಗರದಲ್ಲಿ ನೆಲೆಸಿರುವ ಹಲವರು ಶನಿವಾರ ರಾತ್ರಿಯೇ ತಮ್ಮ ಊರುಗಳತ್ತ ಹೊರಟರು. ಇದರಿಂದಾಗಿ ರಾತ್ರಿ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ಮೆಜೆಸ್ಟಿಕ್ ಸುತ್ತ ದಟ್ಟಣೆ: ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೆಚ್ಚಿನ ಜನ ಸೇರಿದ್ದರು. ಈ ಭಾಗದಲ್ಲಿ ದಟ್ಟಣೆ ಹೆಚ್ಚಿತ್ತು. ಆನಂದರಾವ್‌ ವೃತ್ತ, ಚಾಲುಕ್ಯ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್‌ಎಂಸಿ ಯಾರ್ಡ್‌, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲೂ ದಟ್ಟಣೆ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.