ADVERTISEMENT

ಮದ್ಯದ ಬಾಟಲಿಯಿಂದ ಹಲ್ಲೆ: ಉದ್ಯಮಿ ಸೆರೆ

ಎಚ್ಎಸ್ಆರ್‌ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:57 IST
Last Updated 22 ಅಕ್ಟೋಬರ್ 2021, 19:57 IST

ಬೆಂಗಳೂರು: ಎಚ್‌ಎಸ್‌ಆರ್ ಬಡಾವಣೆ ಮೂರನೇ ಹಂತದಲ್ಲಿರುವ ‘ಶಿಫ್ಟ್’ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಕೇರಳದ ಉದ್ಯಮಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ಅ. 20ರಂದು ರಾತ್ರಿ ನಡೆದಿರುವ ಘಟನೆ ಕುರಿತು ಬೇಗೂರಿನ ಕೆ. ಸೂರ್ಯಕಾಂತ್ ದೂರು ನೀಡಿದ್ದಾರೆ. ಅದರನ್ವಯ ಉದ್ಯಮಿ ರಾಹುಲ್ ರಾಜ್ ಹಾಗೂ ಸ್ನೇಹಿತರಾದ ಯುವರಾಜ್, ಗಣೇಶ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ದೂರುದಾರ ಸೂರ್ಯಕಾಂತ್, ಸ್ನೇಹಿತರ ಜತೆಗೂಡಿ ಊಟ ಮಾಡಲೆಂದು ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಆರೋಪಿಗಳು ಸಹ ತಮ್ಮ ಸ್ನೇಹಿತರೊಬ್ಬರ ಹುಟ್ಟುಹಬ್ಬ ಆಚರಿಸಲೆಂದು ಅಲ್ಲಿಗೆ ಬಂದಿದ್ದರು. ಪರಸ್ಪರ ಗುರಾಯಿಸಿದ್ದ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ಹಲ್ಲೆಯಲ್ಲಿ ಅಂತ್ಯ ಕಂಡಿತ್ತು.’

ADVERTISEMENT

‘ರಾತ್ರಿ 10.30ರ ಸುಮಾರಿಗೆ ಸೂರ್ಯಕಾಂತ್ ಅವರ ಸ್ನೇಹಿತರೊಬ್ಬರು ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ತೆರಳಿದ್ದರು. ಅದಾಗಿ ಐದು ನಿಮಿಷಕ್ಕೆ ಸೂರ್ಯಕಾಂತ್ ಸಹ ಶೌಚಾಲಯಕ್ಕೆ ಹೋಗಿದ್ದರು.’

‘ಶೌಚಾಲಯ ಬಳಿ ಸೂರ್ಯಕಾಂತ್ ಅವರನ್ನು ತಡೆದಿದ್ದ ಆರೋಪಿಗಳು, ಪುನಃ ಜಗಳ ತೆಗೆದು ಮಲಯಾಳ ಭಾಷೆಯಲ್ಲಿ ಬೈದಿದ್ದರು. ‘ಏಕೆ ಬೈಯುತ್ತಿದ್ದೀರಾ’ ಎಂಬುದಾಗಿ ದೂರುದಾರ ಕೇಳಿದ್ದಕ್ಕೆ ಗಲಾಟೆ ವಿಕೋಪಕ್ಕೆ ಹೋಗಿತ್ತು’ ಎಂದೂ ಪೊಲೀಸ್‌ ಮೂಲಗಳು ತಿಳಿಸಿವೆ.

ಬಾಟಲಿಗಳಿಂದ ಹೊಡೆದು ರಕ್ತಗಾಯ: ‘ತಮ್ಮನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಾದ ಆರೋಪಿಗಳು, ಮದ್ಯದ ಬಾಟಲ್‌ಗಳಿಂದ ದೂರುದಾರರ ಮೇಲೆ ಹಲ್ಲೆ ಮಾಡಿದ್ದರು. ಕುತ್ತಿಗೆ, ಎಡ ಭುಜ ಹಾಗೂ ಎಡ ಕೈಗೆ ಬಾಟಲಿಯಿಂದ ಹೊಡೆದಿದ್ದರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಲ್ಲೆಯಿಂದಾಗಿ ಸೂರ್ಯಕಾಂತ್ ತೀವ್ರವಾಗಿ ಗಾಯಗೊಂಡಿದ್ದರು. ಸ್ನೇಹಿತರು ಹಾಗೂ ಇತರರು, ಸೂರ್ಯಕಾಂತ್ ಅವರನ್ನು ಆಸ್ಪತ್ರೆಗೆ ಕರೆದು ದಾಖಲಿಸಿದ್ದರು’ ಎಂದೂ ಮೂಲಗಳು ವಿವರಿಸಿವೆ.

‘ವೈದ್ಯರು ನೀಡಿದ್ದ ಮಾಹಿತಿ ಆಧರಿಸಿ ಆಸ್ಪತ್ರೆಗೆ ಹೋಗಿ ಗಾಯಾಳುವಿನ ಹೇಳಿಕೆ ಪಡೆಯಲಾಯಿತು. ಅಕ್ರಮವಾಗಿ ಗುಂಪು ಸೇರಿದ್ದ (ಐಪಿಸಿ 149), ಹಲ್ಲೆ (ಐಪಿಸಿ 323), ಬಾಟಲಿಯಿಂದ ಹಲ್ಲೆ (ಐಪಿಸಿ 324), ಅಕ್ರಮವಾಗಿ ತಡೆದ (ಐಪಿಸಿ 341), ಉದ್ದೇಶ
ಪೂರ್ವಕವಾಗಿ ಶಾಂತಿ ಕದಡಿದ (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.