ADVERTISEMENT

ಭಾರತೀಯ ವಿದ್ಯಾಭವನದಲ್ಲಿ ಸಂತವಾಣಿ ಉತ್ಸವ

ನ.10ರಿಂದ ಆರಂಭ‌: ಚಿತ್ರೋತ್ಸವ, ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 18:51 IST
Last Updated 6 ನವೆಂಬರ್ 2025, 18:51 IST
   

ಬೆಂಗಳೂರು: ಭಾರತದ ಸಂತರ ಸಂದೇಶ, ಧರ್ಮಗಳ ಸಾರ, ನಮ್ಮ ಪರಂಪರೆಯನ್ನು ಪರಿಚಯಿಸಲೆಂದೇ ನಗರದ ಭಾರತೀಯ ವಿದ್ಯಾಭವನದಲ್ಲಿ ನ.10ರಿಂದ 12 ದಿನಗಳ ಕಾಲ ಸಂತವಾಣಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ಚಲನಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ತಜ್ಞರಿಂದ ವಿಚಾರ ಮಂಡನೆ, ಪುಸ್ತಕ ಪ್ರದರ್ಶನ ಆಸಕ್ತರನ್ನು ಆಕರ್ಷಿಸಲಿವೆ ಎಂದು ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್‌.ಎನ್‌. ಸುರೇಶ್‌ ತಿಳಿಸಿದ್ದಾರೆ.

ಭಕ್ತ ಕನಕದಾಸ, ತ್ಯಾಗಯ್ಯ, ಸಂತ ತುಕಾರಾಂ, ಸಂತ ಶಿಶುನಾಳ ಶರೀಫ, ಮೀರಾ ಚಲನಚಿತ್ರಗಳು ಚಿತ್ರೋತ್ಸವದ ಆಕರ್ಷಣೆಯಾಗಲಿವೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಟಿ.ಎಸ್‌. ನಾಗಾಭರಣ ಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಸಾಧು ಸಂತರ ಕುರಿತ ಪುಸ್ತಕಗಳ ಪ್ರದರ್ಶನ, ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದ್ದು ಮೇಳವನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಉದ್ಘಾಟಿಸುವರು.

ADVERTISEMENT

ಪ್ರತಿದಿನ ತಜ್ಞರ ಉಪನ್ಯಾಸ, ದೇಶದ ನಾನಾ ಭಾಗಗಳ ಕಲಾವಿದರ ನೃತ್ಯರೂಪಕ, ಸಮೂಹ ಗಾಯನ ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. 

ಕಲ್ಯಾಣ ಕರ್ನಾಟಕದ ತತ್ವಪದಕಾರರ ತತ್ವಪದಗಳು, ಆಳ್ವಾರ್, ನಯನ್ಮಾರ್‌, ನಾಥ, ಹರಿದಾಸ, ಗುರುಬಾನಿ, ವಾರ್ಕರಿ, ಗೌಡೀಯ, ರಮಾನಂದ, ಶಿವಶರಣ ಸಂಪ್ರದಾಯದ ಕುರಿತು ಪ್ರಸ್ತುತಿ ಇರಲಿದೆ. ಗುಜರಾತ್‌, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಿಂದ ಆಗಮಿಸುವ ಉಪನ್ಯಾಸಕರು ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮದ ಸಂತರ ಕುರಿತು ವಿಚಾರ ಮಂಡಿಸುವರು. 

ಆಸಕ್ತರು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್ ಅವರನ್ನು 9845625899 ಮೂಲಕ ಸಂಪರ್ಕಿಸಬಹುದು. santvanibvbblr@gmail.com ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.