ADVERTISEMENT

BWSSB ನೀರಿನ ಬಿಲ್‌: ಅಸಲು ಕಟ್ಟಿದರೆ, ಬಡ್ಡಿ, ದಂಡ ಮನ್ನಾ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 20:15 IST
Last Updated 27 ನವೆಂಬರ್ 2025, 20:15 IST
ಜಲಮಂಡಳಿ
ಜಲಮಂಡಳಿ   

ಬೆಂಗಳೂರು: ಜಲಮಂಡಳಿಯ ಗ್ರಾಹಕರು ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್‌ನಲ್ಲಿ, ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಮನ್ನಾ ಮಾಡುವ ‘ಒಂದು ಬಾರಿ ಪರಿಹಾರ ಯೋಜನೆ’ಗೆ (ಒಟಿಎಸ್‌) ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯಾಪ್ತಿಯಲ್ಲಿ ಮೂರು ತಿಂಗಳು ಒಟಿಎಸ್‌ ಜಾರಿಗೆ ತೀರ್ಮಾನಿಸಲಾಗಿದೆ‌’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

‘ಗ್ರಾಹಕರು ಫೆಬ್ರವರಿ 2025ರವರೆಗೆ ₹701.71 ಕೋಟಿ ನೀರಿನ ಬಿಲ್‌ನ ಬಾಕಿ ಉಳಿಸಿಕೊಂಡಿದ್ದಾರೆ. ಈ ಮೊತ್ತದಲ್ಲಿ ಅಸಲು ₹439.03 ಕೋಟಿ, ಬಡ್ಡಿ ₹262.68 ಕೋಟಿ ಇದೆ. ಒಟಿಎಸ್‌ ಮೂಲಕ ಗ್ರಾಹಕರಿಂದ ಬಾಕಿಯಿರುವ ನೀರಿನ ಅಸಲು ಬಿಲ್ಲಿನ ಮೊತ್ತವನ್ನು ಪಾವತಿಸಿಕೊಳ್ಳುವುದರಿಂದ ಬೆಂಗಳೂರು ಜಲಮಂಡಳಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಬಹುದಾಗಿದೆ. ಜನರಿಗೂ ಬಡ್ಡಿ ಕಟ್ಟುವುದರಿಂದ ವಿನಾಯಿತಿ ಸಿಗಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಘನತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಮೂಲಕ ‘ಭೂಭರ್ತಿ ತಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ’ ಪ್ಯಾಕೇಜ್ ಕಾಮಗಾರಿಗಳನ್ನು ₹100 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಕೂಡಾ ಸಭೆ ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.