ADVERTISEMENT

ಲಿಂಗರಾಜಪುರ: ಪೈಪ್‌ ತುಕ್ಕು ಹಿಡಿದಿರುವ ಕಾರಣ ನೀರು ‌ಕಲುಷಿತ– ಜಲಮಂಡಳಿ

ಲಿಂಗರಾಜಪುರ ಭಾಗದಲ್ಲಿ ಸಮಸ್ಯೆ, ಎಚ್ಚೆತ್ತುಕೊಂಡ ಜಲಮಂಡಳಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:18 IST
Last Updated 5 ಜನವರಿ 2026, 20:18 IST
ಲಿಂಗರಾಜಪುರದಲ್ಲಿ ನೀರು ಪೂರೈಕೆಯ ಪೈಪ್‌ ಬದಲಾವಣೆಯಲ್ಲಿ ನಿರತರಾಗಿದ್ದ ಜಲಮಂಡಳಿ ಸಿಬ್ಬಂದಿ
ಲಿಂಗರಾಜಪುರದಲ್ಲಿ ನೀರು ಪೂರೈಕೆಯ ಪೈಪ್‌ ಬದಲಾವಣೆಯಲ್ಲಿ ನಿರತರಾಗಿದ್ದ ಜಲಮಂಡಳಿ ಸಿಬ್ಬಂದಿ   

ಬೆಂಗಳೂರು: ಲಿಂಗರಾಜಪುರದಲ್ಲಿ ಕೆಲವು ದಿನಗಳಿಂದ ಕಲುಷಿತ ನೀರು ಸರಬರಾಜು ಆಗಿರುವುದಕ್ಕೆ ಹಳೆ ಪೈಪ್‌ಲೈನ್‌ ಒಡೆದಿರುವುದೇ ಮುಖ್ಯ ಕಾರಣ ಎಂದು ಜಲಮಂಡಳಿ ತಿಳಿಸಿದೆ. 

40 ವರ್ಷ ಹಳೆಯದಾದ ಪೈಪ್‌ಲೈನ್ ತುಕ್ಕು ಹಿಡಿದಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಇದರಿಂದಾಗಿ ನೀರು ಕಲುಷಿತಗೊಳ್ಳುತ್ತಿತ್ತು ಎಂದು ಮಂಡಳಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಲಿಂಗರಾಜಪುರಂನಲ್ಲಿ ಕಾಣಿಸಿಕೊಂಡಿದ್ದ ಕಲುಷಿತ ನೀರಿನ ಸಮಸ್ಯೆಯ ಮೂಲವನ್ನು ರೋಬೋಟಿಕ್ ತಂತ್ರಜ್ಞಾನ ಬಳಸಿಕೊಂಡು ಪತ್ತೆಹಚ್ಚಲಾಗಿದೆ. ಈಗಾಗಲೇ ಬಡಾವಣೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು. ಅದನ್ನು ಮುಂದುವರಿಸಲಾಗುತ್ತಿದೆ.

ADVERTISEMENT

ವಾರದ ಹಿಂದೆಯೇ ಲಿಂಗರಾಜಪುರ ಬಡಾವಣೆಯ ಕನಕದಾಸ ಲೇಔಟ್‌, ಕೆಎಸ್‌ಆರ್‌ಟಿಸಿ ಲೇಔಟ್‌ನ ಹಲವು ಮನೆಗಳಿಗೆ ಕಲುಷಿತ ನೀರು ಹರಿದು ಬರುತ್ತಿರುವ ಕುರಿತು ಸ್ಥಳೀಯರು ಜಲಮಂಡಳಿಗೆ ದೂರು ನೀಡಿದ್ದರು. ಆದರೆ ಕ್ರಮ ಆಗಿರಲಿಲ್ಲ. ಸಮಸ್ಯೆ ತೀವ್ರಗೊಳ್ಳುತಿದ್ದಂತೆ ಎಚ್ಚೆತ್ತ ಜಲಮಂಡಳಿ ಸಮಸ್ಯೆ ಮೂಲ ಪತ್ತೆ ಮಾಡುವ ಜತೆಗೆ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕೈಗೊಂಡಿತ್ತು.

‘ಈ ಭಾಗದಲ್ಲಿ ಆಗಾಗ ಕಲುಷಿತ ನೀರು ಸರಬರಾಜು ಆಗುತ್ತಲೇ ಇರುತ್ತದೆ. ದೂರು ನೀಡಿದಾಗ ಜಲಮಂಡಳಿ ಸಿಬ್ಬಂದಿ ಸರಿಪಡಿಸಿದರೂ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಇದರಿಂದ ಈಗ ಮತ್ತೆ ಸಮಸ್ಯೆ ಉಲ್ಬಣಿಸಿದೆ. ಕಾವೇರಿ ನೀರಿಗೆ ಚರಂಡಿ ನೀರು ಸೇರಿಕೊಂಡು ಮನೆ ಸೇರುತ್ತಿದೆ. ಕೆಲವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ಹಳೆಯ ಪೈಪ್‌ಲೈನ್ ಅನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಪೈಪ್ ಬದಲಾವಣೆ ಕಾರ್ಯ ಮುಗಿದ ತಕ್ಷಣ ಶುದ್ಧ ನೀರು ಸರಬರಾಜು ಪುನರಾರಂಭವಾಗಲಿದೆ’ ಎಂದು ಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.