ADVERTISEMENT

ಬ್ಯಾಡರಹಳ್ಳಿಯಲ್ಲಿ ಪ್ರಕರಣ: ‘ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸಿದ್ದ ತಂದೆ’

ಬ್ಯಾಡರಹಳ್ಳಿಯಲ್ಲಿ ಐವರು ಮೃತಪಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:47 IST
Last Updated 20 ಸೆಪ್ಟೆಂಬರ್ 2021, 21:47 IST
   

ಬೆಂಗಳೂರು: ಬ್ಯಾಡರಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಕೂಸು ಸೇರಿ ಐವರು ಮೃತಪಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮೃತ ಮಧುಸಾಗರ್ ಬರೆದಿದ್ದಾರೆ ಎನ್ನಲಾದ ಮರಣ ಪತ್ರ ಪೊಲೀಸರಿಗೆ ಸಿಕ್ಕಿದ್ದು, ತಂದೆ ಶಂಕರ್ ಮೇಲೆಯೇ ಇದೀಗ ಅನುಮಾನ ವ್ಯಕ್ತವಾಗುತ್ತಿದೆ.

ತಿಗಳರಪಾಳ್ಯದ ಐಷಾರಾಮಿ ಮನೆಯಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾಕುಮಾರಿ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) ನೇಣು ಹಾಕಿಕೊಂಡು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಘಟನೆ ನಡೆದ ಮನೆಯಲ್ಲಿ ಪೊಲೀಸರು ಭಾನುವಾರ ಶೋಧ ನಡೆಸಿದ್ದರು. ಮೂರು ಮರಣ ಪತ್ರಗಳು ಸಿಕ್ಕಿದ್ದವು. ಮಧುಸಾಗರ್ ಕೊಠಡಿಯಲ್ಲಿ ಸಿಕ್ಕಿರುವ ಮರಣಪತ್ರ, ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ADVERTISEMENT

‘ನನ್ನ ತಂದೆ ಸ್ವಾರ್ಥಿ. ಐವರು ಮಹಿಳೆಯರ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ. ಆ ಪೈಕಿ ಮಹಿಳೆಯೊಬ್ಬರ ಮಗಳನ್ನು ಮದುವೆಯಾಗುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು’ ಎಂದು ಮಧುಸಾಗರ್ ಮರಣಪತ್ರದಲ್ಲಿ ಬರೆದಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

‘ವಿಪರೀತ ಕುಡಿಯುತ್ತಿದ್ದ ತಂದೆ, ತಾಯಿ ಜೊತೆ ಜಗಳ ಮಾಡುತ್ತಿದ್ದರು. ಹಲ್ಲೆಯನ್ನೂ ಮಾಡಿದ್ದರು. ಬಾಯಲ್ಲಿ ಚಪ್ಪಲಿ ಇಟ್ಟು ಅವಮಾನಿಸುತ್ತಿದ್ದರು. ನನ್ನ ಅಕ್ಕಂದಿರ ಜೀವನವನ್ನೂ ತಂದೆಯೇ ಹಾಳು ಮಾಡಿದರು’ ಎಂಬ ಅಂಶವೂ ಪತ್ರದಲ್ಲಿರುವುದಾಗಿ ಮೂಲಗಳು ತಿಳಿಸಿವೆ.

ಶಂಕರ್, ಅಳಿಯಂದಿರ ವಿಚಾರಣೆ: ಮರಣಪತ್ರಗಳು ಪತ್ತೆಯಾಗುತ್ತಿದ್ದಂತೆ ಪೊಲೀಸರು, ಶಂಕರ್ ಹಾಗೂ ಅವರ ಅಳಿಯಂದಿರಾದ ಪ್ರವೀಣ್ ಹಾಗೂ ಶ್ರೀಕಾಂತ್ ಅವರನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದರು.

ಮಕ್ಕಳ ಮರಣಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಹಲ್ಲೇಗೆರೆ ಶಂಕರ್, ‘ಘಟನೆಯ ತನಿಖೆ ನಡೆಯುತ್ತಿದೆ. ಪೊಲೀಸ್ ಪ್ರಕ್ರಿಯೆ ಭಾಗವಾಗಿ ವಿಚಾರಣೆಗೆ ಹಾಜರಾಗಿದ್ದೇನೆ. ಮರಣಪತ್ರದಲ್ಲಿ ಇರುವುದು ಸುಳ್ಳು. ಉಳಿದೆಲ್ಲ ಮಾಹಿತಿ ಹಂತಹಂತವಾಗಿ ಎಲ್ಲರಿಗೂ ತಿಳಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.