ADVERTISEMENT

ಸಂಚಾರ ದಟ್ಟಣೆ ನಿವಾರಣೆಗೆ ರೂಪರೇಷೆ ಸಿದ್ಧಪಡಿಸಿದ ಪಾಲಿಕೆ

ಬೈಯಪ್ಪನಹಳ್ಳಿ ಹೊಸ ರೈಲ್ವೆ ಟರ್ಮಿನಲ್‌ ಉದ್ಘಾಟನೆಗೆ ಸಜ್ಜು * ಐಒಸಿ ಜಂಕ್ಷನ್‌ನಲ್ಲಿ ರೋಟರಿ ಮೇಲ್ಸೇತುವೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 20:38 IST
Last Updated 8 ಫೆಬ್ರುವರಿ 2021, 20:38 IST
ಬೈಯಪ್ಪನಹಳ್ಳಿ ಆಸುಪಾಸಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಯೋಜನೆಯ ರೂಪರೇಷೆಗಳನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೋಮವಾರ ಪರಿಶೀಲಿಸಿದರು
ಬೈಯಪ್ಪನಹಳ್ಳಿ ಆಸುಪಾಸಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಯೋಜನೆಯ ರೂಪರೇಷೆಗಳನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೋಮವಾರ ಪರಿಶೀಲಿಸಿದರು   

ಬೆಂಗಳೂರು: ಬೈಯಪ್ಪನಹಳ್ಳಿಯ ನೂತನ ರೈಲ್ವೆ ಟರ್ಮಿನಲ್‌ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ. ಈ ಟರ್ಮಿನಲ್‌ ಲೋಕಾರ್ಪಣೆಗೊಂಡ ಬಳಿಕ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಭಾರಿ ಪ್ರಮಾಣದಲ್ಲಿ ಹೆಚ್ಚುವ ನಿರೀಕ್ಷೆ ಇದೆ. ಇಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ ರೂಪರೇಷೆ ಸಿದ್ಧಪಡಿಸಿದೆ.

ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಹಾಗೂ ಹೊರವರ್ತುಲ ರಸ್ತೆಯಿಂದ ಕೆ.ಆರ್‌.ಪುರ ಕಡೆಗೆ ಹೋಗುವ ರಸ್ತೆಯಲ್ಲಿ ಐಒಸಿ ಜಂಕ್ಷನ್‌ನಲ್ಲಿ ವರ್ತುಲಾಕಾರದ ಮೇಲ್ಸೇತುವೆ (ರೋಟರಿ ಫ್ಲೈಓವರ್‌) ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಈ ಕಾಮಗಾರಿಗಳು ನಡೆಯುವ ಸ್ಥಳಗಳನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೋಮವಾರ ಪರಿಶೀಲನೆ ನಡೆಸಿದರು.

‘ಅಂತರ ರಾಜ್ಯಗಳ ನಡುವೆ ಸಂಚರಿಸುವ ಅನೇಕ ರೈಲುಗಳು ಇದುವರೆಗೆ ನಗರದೊಳಗಿನ ರೈಲು ನಿಲ್ದಾಣಗಳಿಗೆ ಬರುತ್ತಿದ್ದವು. ಇನ್ನು ಅವು ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ನಿಂದಲೇ ಪ್ರಯಾಣ ಬೆಳೆಸಲಿವೆ. ನಿತ್ಯ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇಲ್ಲಿ ಬಂದಿಳಿಯುವ ನಿರೀಕ್ಷೆ ಇದೆ. ಇದರಿಂದ ಉಂಟಾಗುವ ಸಂಚಾರ ದಟ್ಟಣೆಗೆ ₹ 120 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದೇವೆ’ ಎಂದು ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಇಂದಿರಾನಗರದ ಹಳೆ ಮದ್ರಾಸು ರಸ್ತೆ ಕಡೆಯಿಂದ, ಹೊರವರ್ತುಲ ರಸ್ತೆಯಿಂದ, ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಮೂಲಕ, ಬಾಣಸವಾಡಿ ಕಡೆಯಿಂದ ಹಾಗೂ ಕಮ್ಮನಹಳ್ಳಿ ಕಡೆಯಿಂದ ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಜನ ಬರುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಪ್ರದೇಶದಲ್ಲಿ ದ್ವಿಪಥದಿಂದ ಕೂಡಿದ ಎಲ್ಲ ರಸ್ತೆಗಳನ್ನು ಚತುಷ್ಪಥಗೊಳಿಸುತ್ತೇವೆ. ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆ.ಆರ್‌.ಪುರದ ಬಳಿ ಐಒಸಿ ಜಂಕ್ಷನ್‌ನಲ್ಲಿ ರೋಟರಿ ಫ್ಲೈಓವರ್‌ ನಿರ್ಮಿಸುತ್ತೇವೆ’ ಎಂದರು.

‘ಈ ಕಾಮಗಾರಿಗಳಿಗೆ ರಕ್ಷಣಾ ಇಲಾಖೆ ಜಾಗ ಹಾಗೂ ರೈಲ್ವೆ ಇಲಾಖೆ ಜಾಗ ಬಳಕೆ ಆಗಲಿದೆ. ಯಾವುದೇ ಖಾಸಗಿ ಜಾಗ ಸ್ವಾಧೀನ ಪಡಿಸುವ ಅಗತ್ಯ ಇಲ್ಲ. ಹಾಗಾಗಿ ಈ ಯೊಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬಹುದು’ ಎಂಬ ಆಶಯ ವ್ಯಕ್ತಪಡಿಸಿದರು.

‘ಈ ಯೋಜನೆಗೆ ₹ 120 ಕೋಟಿ ವೆಚ್ಚವಾಗಲಿದೆ. ನಗರೋತ್ಥಾನ ಯೋಜನೆಯಡಿ ಇದಕ್ಕೆ ₹ 20 ಕೋಟಿ ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ ₹ 100 ಕೋಟಿ ಅನುದಾನ ಒದಗಿಸುವಂತೆ ಸರ್ಕಾರವನ್ನು ಕೋರುತ್ತವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್‌ ಅವರು ಮಂಗಳವಾರ ಈ ಯೋಜನೆಯನ್ನು ಪರಿಶೀಲನೆ ನಡೆಸಲಿದ್ದಾರೆ’ ಎಂದರು.

‘ಬೈಯಪ್ಪನಹಳ್ಳಿ ಟರ್ಮಿನಲ್‌ ಇದೇ ತಿಂಗಳ 20ರಿಂದ 25ರ ನಡುವೆ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದರ ಉದ್ಘಾಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.