ADVERTISEMENT

ಎಫ್ಐಆರ್ ದಾಖಲಿಸಲು ₹ 1 ಲಕ್ಷ ಲಂಚ: ಬೈಯಪ್ಪನಹಳ್ಳಿ ಠಾಣೆ ಪಿಎಸ್ಐ ಸೌಮ್ಯಾ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 16:28 IST
Last Updated 12 ಜನವರಿ 2021, 16:28 IST
   

ಬೆಂಗಳೂರು: ಕಳ್ಳತನವಾಗಿದ್ದ ಮೊಬೈಲ್‌ ಖರೀದಿಸಿದ್ದ ವ್ಯಕ್ತಿಯೊಬ್ಬರನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹ 1 ಲಕ್ಷ ಲಂಚ ಪಡೆದ ನಗರದ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸೌಮ್ಯಾ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಜಯಪ್ರಕಾಶ್ ರೆಡ್ಡಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬಂಧಿಸಿದೆ.

ಮೊಬೈಲ್‌ ಕಳ್ಳನನ್ನು ಬಂಧಿಸಿದ್ದ ಸೌಮ್ಯಾ ಮತ್ತು ತಂಡ, ಕಳವು ಮಾಡಿದ್ದ ಮೊಬೈಲ್‌ ಖರೀದಿಸಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಒಡ್ಡಿದ್ದರು. ₹ 2 ಲಕ್ಷ ಲಂಚ ನೀಡಿದರೆ ಕ್ರಮ ಜರುಗಿಸುವುದಿಲ್ಲ ಎಂದು ತಿಳಿಸಿದ್ದರು. ಈ ಕುರಿತು ಆ ವ್ಯಕ್ತಿಯ ಹೆಂಡತಿ ಸೋಮವಾರ ಎಸಿಬಿ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದರು.

ಮಂಗಳವಾರ ₹ 1 ಲಕ್ಷ ತಲುಪಿಸುವಂತೆ ದೂರುದಾರರಿಗೆ ಆರೋಪಿಗಳು ಸೂಚಿಸಿದ್ದರು. ಮಂಗಳವಾರ ಮಧ್ಯಾಹ್ನ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲೇ ಸೌಮ್ಯಾ ಮತ್ತು ಅವರ ಪರವಾಗಿ ಲಂಚದ ಹಣ ಪಡೆದ ಜಯಪ್ರಕಾಶ್‌ ರೆಡ್ಡಿ ಅವರನ್ನು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದ ತಂಡ ಬಂಧಿಸಿದೆ.

ADVERTISEMENT

ಕಾನ್‌ಸ್ಟೆಬಲ್‌ ಕಾಲು ಮುರಿತ: ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸೌಮ್ಯಾ, ಜಯಪ್ರಕಾಶ್‌ ರೆಡ್ಡಿ ಅವರೊಂದಿಗೆ ಇತರ ಸಿಬ್ಬಂದಿಯೂ ಠಾಣೆಯೊಳಗೆ ಇದ್ದರು. ಎಸಿಬಿ ದಾಳಿಯಿಂದ ಗಾಬರಿಗೊಂಡ ಕುಮಾರ್‌ ಎಂಬ ಕಾನ್‌ಸ್ಟೆಬಲ್‌ ತಮ್ಮನ್ನೂ ಬಂಧಿಸಬಹುದು ಎಂಬ ಭಯದಲ್ಲಿ ಕಟ್ಟಡದ ಮೊದಲನೇ ಮಹಡಿಯಿಂದ ಜಿಗಿದಿದ್ದಾರೆ. ಅವರ ಕಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್‌ಸ್ಪೆಕ್ಟರ್‌ ಪಾತ್ರದ ಪರಿಶೀಲನೆ: ‘ಪಿಎಸ್‌ಐ ವಿರುದ್ಧ ಮಾತ್ರ ದೂರು ಬಂದಿತ್ತು. ಇನ್‌ಸ್ಪೆಕ್ಟರ್‌ ಪಾತ್ರದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಎಸ್‌ಪಿ ತಿಳಿಸಿದ್ದಾರೆ.

ಲಂಚ ಪ್ರಕರಣದಲ್ಲಿ ಗುರುವಾರದಿಂದ ತಲೆಮರೆಸಿಕೊಂಡಿರುವ ಚಿಕ್ಕಜಾಲ ಠಾಣೆ ಇನ್‌ಸ್ಪೆಕ್ಟರ್‌ ಯಶವಂತ ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.