ADVERTISEMENT

ಸಿಎಎ: 2ನೇ ಸ್ವಾತಂತ್ರ್ಯ ಸಂಗ್ರಾಮ: ಅರುಣ್ ಕುಮಾರ್ ಶ್ರೀವಾಸ್ತವ

ಮಹಾತ್ಮ ಗಾಂಧೀಜಿ 150ನೇ ಜನ್ಮ ವರ್ಷಾಚರಣೆ – ಸಮಾಜವಾದಿ ವಿಚಾರ ಯಾತ್ರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:48 IST
Last Updated 24 ಫೆಬ್ರುವರಿ 2020, 19:48 IST
ದೆಹಲಿಯಿಂದ ಹೊರಟು ಬೆಂಗಳೂರಿಗೆ ಬಂದಿರುವ ಸಮಾಜವಾದಿ ವಿಚಾರ ಯಾತ್ರೆಯ ತಂಡ ಸೋಮವಾರ ನಗರದ ಗಾಂಧಿ ಭವನದಲ್ಲಿ ಚಿಂತನೆಯಲ್ಲಿ ತೊಡಗಿತ್ತು – ಪ್ರಜಾವಾಣಿ ಚಿತ್ರ
ದೆಹಲಿಯಿಂದ ಹೊರಟು ಬೆಂಗಳೂರಿಗೆ ಬಂದಿರುವ ಸಮಾಜವಾದಿ ವಿಚಾರ ಯಾತ್ರೆಯ ತಂಡ ಸೋಮವಾರ ನಗರದ ಗಾಂಧಿ ಭವನದಲ್ಲಿ ಚಿಂತನೆಯಲ್ಲಿ ತೊಡಗಿತ್ತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು 1942ರಲ್ಲಿ ಬಹುದೊಡ್ಡ ಚಳವಳಿ ನಡೆಯಿತು. ಅದು ಸಫಲವೂ ಆಯಿತು. ಜಾತಿ, ಧರ್ಮ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ಮೂಡಿಸುತ್ತಿರುವ ಒಡಕನ್ನು ತಡೆಗಟ್ಟಲು ಎರಡನೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ, ಇದೂ ಯಶಸ್ವಿಯಾಗುವುದು ನಿಶ್ಚಿತ’ ಎಂದು ಸಮಾಜವಾದಿ ವಿಚಾರ ಯಾತ್ರೆಯ ಮುಂದಾಳು ಅರುಣ್ ಕುಮಾರ್ ಶ್ರೀವಾಸ್ತವ ಹೇಳಿದರು.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಜನವರಿ 30ರಂದು ದೆಹಲಿಯಿಂದ ಹೊರಟಿರುವ ಯಾತ್ರೆ ನಗರಕ್ಕೆ ಬಂದಿದ್ದು, ಭಾನುವಾರ ಈ ಯಾತ್ರೆಯ ಉದ್ದೇಶ, ಆಶಯಗಳ ಬಗ್ಗೆ ಅವರು ಮಾಹಿತಿ ನೀಡಿದರು.

‘ಸಬ್ ಕಾ ಸಾಥ್‌–ಸಬ್‌ ಕಾ ವಿಕಾಸ್–ಸಬ್‌ ಕಾ ವಿಶ್ವಾಸ್‌ ಎಂದು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ದೇಶದ ಪ್ರಗತಿ ಸಾಧಿಸುವಲ್ಲಿ, ಜನವ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ. 55 ಕೋಟಿ ಕಾರ್ಮಿಕರ ಹಿತವನ್ನು ಸರ್ಕಾರ ಬಲಿ ಕೊಡುತ್ತಿದೆ. ಇದೆಲ್ಲದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವುದರ ಜತೆಗೆ 21 ಹಕ್ಕೊತ್ತಾಯಗಳ ಕುರಿತು ಜನರಿಗೆ ಮನವರಿಕೆ ಮಾಡುತ್ತಈ ಯಾತ್ರೆಯನ್ನು ಮುನ್ನಡೆಸಲಾಗುತ್ತಿದೆ’ ಎಂದು ಯಾತ್ರೆಯ ಇನ್ನೊಬ್ಬ ಮುಂದಾಳು ಡಾ.ಸುನೀಲಂ ಹೇಳಿದರು.

ADVERTISEMENT

ಸಿಎಎಗೆ ವಿರೋಧ: ‘ದೇಶದ ವಿವಿಧತೆ ಮತ್ತು ಏಕತೆಯನ್ನು ಜಾತಿ ಮತ್ತು ಧರ್ಮದ ಹೆಸರಲ್ಲಿ ನುಚ್ಚು ನೂರು ಮಾಡುವ ಪ್ರಯತ್ನದ ಭಾಗವಾಗಿ ಪೌರತ್ವ (ತಿದ್ದುಪಡಿ) ಕಾಯ್ದೆ ರೂಪಿಸಲಾಗಿದೆ. ಇದು ಕೋಮುವಾದಿ ಮತ್ತು ತಾರತಮ್ಯವಾದಿಯಾಗಿದ್ದು, ಜನ ಇಂದು ದೊಡ್ಡ ಪ್ರಮಾಣದ ದೇಶದೆಲ್ಲೆಡೆ ಪ್ರತಿಭಟನೆಗೆ ಇಳಿದಿದ್ದಾರೆ. ಈ ಯಾತ್ರೆಯ ಉದ್ದಕ್ಕೂ ಭಾರತದ ಸಂವಿಧಾನದ ಮೌಲ್ಯಗಳನ್ನು ಅನುಷ್ಠಾನಗೊಳಿಸಲು ಜನರಲ್ಲಿ ಮನವರಿಕೆ ಮಾಡಲಾಗುತ್ತದೆ’ ಎಂದು ರಾಜ್ಯದಲ್ಲಿ ಯಾತ್ರೆಯ ಮುಂದಾಳತ್ವ ವಹಿಸಿರುವ ಬಿ.ಆರ್‌.ಪಾಟೀಲ ಹೇಳಿದರು.

ಆರಾಧನಾ ಭಾರ್ಗವ್, ಪಿ.ಜೆ.ಜೋಸೀ, ಲೋಕೇಶ್ ಭಿವಾನಿ, ರಾಹುಲ್‌, ಬಾಲಾ ಭಾಯ್‌, ಅಂಜನಾ, ಗಣೇಶ್‌, ವಿಜಯ್‌, ಅರವಿಂದ ದಳವಾಯಿ ಹಾಗೂ ಜಿ.ಕೆ.ಸಿ.ರೆಡ್ಡಿ ಅವರು ಯಾತ್ರೆಯಲ್ಲಿರುವ ಇತರ ಸದಸ್ಯರು.

ರಾಷ್ಟ್ರ ಸೇವಾ ದಳ, ಹಿಂದ್‌ ಮಜ್ದೂರ್‌ ಸಭಾ, ನ್ಯಾಷನಲ್‌ ಕೋಆರ್ಡಿನೇಷನ್‌ ಆಫ್‌ ಪಬ್ಲಿಕ್ ಮೂವ್‌ಮೆಂಟ್‌ (ಎನ್‌ಎಪಿಎಂ), ಹಮ್‌ ಭಾರತ್‌ ಕೆ ಲೋಗ್, ವಿ ದಿ ಸೋಷ್ಯಲಿಸ್ಟ್‌ ಇನ್‌ಸ್ಟಿಟ್ಯೂಷನ್ಸ್‌, ಯೂಸುಫ್‌ ಮೆಹರ್ ಅಲಿ ಸೆಂಟರ್ ಮೊದಲಾದ ಸಂಘಟನೆಗಳ ಸಹಕಾರದೊಂದಿಗೆ ಈ ಯಾತ್ರೆ ನಡೆಯುತ್ತಿದೆ.

ಯಾತ್ರೆಯ ಕೆಲವು ಹಕ್ಕೊತ್ತಾಯಗಳು

*ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ರದ್ದುಪಡಿಸಿ

*ಸಾರ್ವಜನಿಕ ವಲಯದ ಉದ್ಯಮ, ಶಿಕ್ಷಣ, ಆರೋಗ್ಯ ಸೇವೆಗಳ ಖಾಸಗೀಕರಣ ನಿಲ್ಲಿಸಿ

*ಎಲ್ಲ ನಿರುದ್ಯೋಗಿಗಳಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಮಾಸಿಕ ತಲಾ ₹ 10 ಸಾವಿರ ನೀಡಿ

*ಸಾಲಮನ್ನಾ ಬದಲಿಗೆ ಕೃಷಿ ಎಲ್ಲ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಲೆ ನಿಗದಿಪಡಿಸಿ

*ಚುನಾವಣಾ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.