ADVERTISEMENT

ತಂಗಿ ‘ಪ್ರೇಮ’ಕ್ಕೆ ಸಹಾಯ ಮಾಡಿದ್ದಾನೆಂದು ಕೊಲೆ

ಕ್ಯಾಬ್ ಚಾಲಕನ ಕೊಂದಿದ್ದ ಪ್ರಕರಣ; ರೌಡಿಶೀಟರ್ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:42 IST
Last Updated 27 ಆಗಸ್ಟ್ 2019, 19:42 IST
   

ಬೆಂಗಳೂರು: ಜೆ.ಪಿ.ನಗರದಲ್ಲಿ ನಡೆದಿದ್ದ ಕ್ಯಾಬ್ ಚಾಲಕ ಸುನೀಲ್ ಕುಮಾರ್ (33) ಎಂಬುವರ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಮಾರೇನಹಳ್ಳಿಯ ವಿವೇಕ್ (28) ಹಾಗೂ ಮುನಿಸ್ವಾಮಪ್ಪ ಲೇಔಟ್‌ನ ಅಖಿಲೇಶ್ (22) ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಶ್ರೀನಿವಾಸ್, ರೇಣುಕಪ್ರಸಾದ್, ರಘು ಹಾಗೂ ಅನುಷ್ ತಲೆಮರೆಸಿಕೊಂಡಿದ್ದಾರೆ.

‘ಎರಡು ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿ ಆಗಿದ್ದ ವಿವೇಕ್, ಜೆ.ಪಿ.ನಗರ ಠಾಣೆಯ ರೌಡಿಶೀಟರ್. ಆತನ ತಂಗಿ ಪರಿಚಯಸ್ಥ ಯುವಕನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರು ಮದುವೆಯಾಗಿ ಮನೆ ಬಿಟ್ಟು ಹೋಗಲು ಸುನೀಲ್ ಕುಮಾರ್ ಸಹಾಯ ಮಾಡಿದ್ದ. ಅದೇ ದ್ವೇಷದಲ್ಲಿ ವಿವೇಕ್, ತನ್ನ ಸಹಚರರ ಜೊತೆ ಸೇರಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಬೈಕ್‌ ಅಡ್ಡಗಟ್ಟಿ ಕೊಲೆ: ‘ಸುನೀಲ್ ಬಿಡುವಿನ ವೇಳೆಯಲ್ಲಿ ಪಾರ್ಕಿಂಗ್ ನಿರ್ವಹಣೆ ಕೆಲಸ ಮಾಡುತ್ತಿದ್ದರು. ಇದೇ 24ರಂದು ರಾತ್ರಿ 12.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದರು’ ಎಂದು ಅಧಿಕಾರಿ ಹೇಳಿದರು.

‘ಆರೋಪಿಗಳು ಕಾರಿನಲ್ಲೇ ಬೈಕ್‌ ಹಿಂಬಾಲಿಸಿದ್ದರು. ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ಗೆ ಕಾರು ಗುದ್ದಿಸಿ ಸುನೀಲ್‌ ಅವರನ್ನು ಬೀಳಿಸಿದ್ದರು. ನಂತರ, ಬಿಯರ್ ಬಾಟಲಿಯಿಂದ ಇರಿದು ಕೊಂದಿದ್ದರು’ ಎಂದು ಮಾಹಿತಿ ನೀಡಿದರು.

‘ತಂಗಿ ಮನೆ ಬಿಟ್ಟು ಹೋದ ನಂತರ ಸಾಕಷ್ಟು ನೋವು ಅನುಭವಿಸುತ್ತಿದ್ದೆ. ಆಕೆ ವಾಸವಿರುವ ವಿಳಾಸ ತಿಳಿಸುವಂತೆ ಸುನೀಲ್‌ನನ್ನು ಕೋರಿದ್ದೆ. ಆತ ಯಾವುದೇ ಮಾಹಿತಿ ನೀಡಲಿಲ್ಲ. ಜೊತೆಗೆ, ತಂಗಿ ಹಾಗೂ ನಮ್ಮ ಮನೆತನದ ಬಗ್ಗೆ ಅಪಪ್ರಚಾರ ಮಾಡಲಾರಂಭಿಸಿದ್ದ. ಅದೇ ಕಾರಣಕ್ಕೆ ಆತನನ್ನು ಕೊಲೆ ಮಾಡಿದೆ’ ಎಂಬುದಾಗಿ ಆರೋಪಿ ವಿವೇಕ್‌ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.